ಆಡಳಿತ ಮಂಡಳಿಯ ಎಡವಟ್ಟಿಗೆ ಶಾಲೆಗೆ ಬೀಗ ಜಡಿದ ಬ್ಯಾಂಕ್: ವಿದ್ಯಾರ್ಥಿಗಳ ಪರದಾಟ
ಬಳ್ಳಾರಿ, ಜೂನ್ 2: ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳು ಆರಂಭಗೊಂಡಿದೆ. ಎರಡು ತಿಂಗಳು ಬೇಸಿಗೆ ರಜೆ ಮುಗಿಸಿ ಇದೀಗ ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ರಾಜ್ಯದ ಎಲ್ಲಾ ಶಾಲೆಯ ಮಕ್ಕಳು ಹೊಸ ಶೈಕ್ಷಣಿಕ ವರ್ಷದ ಆರಂಭದ ಸಂಭ್ರಮದಲ್ಲಿದ್ದರೆ, ಬಳ್ಳಾರಿಯ ಶಾಲೆಯೊಂದಲ್ಲೆ ಆರಂಭವಾದ ಎರಡನೇ ದಿನವೇ ಮಕ್ಕಳಿಗೆ ಶಾಕ್ ಎದುರಾಗಿದೆ. ಆಡಳಿತ ಮಂಡಳಿ ಮಾಡಿರುವ ಎಡವಟ್ಟಿನಿಂದ ಮಕ್ಕಳಿಗೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಶಾಲಾ ಆಡಳಿತ ಮಂಡಳಿ ಮಾಡಿದ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿ ಶಾಲೆಯನ್ನೇ ಸೀಜ್ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾ ಸಂಸ್ಥೆಯನ್ನು ಶಾಲಾ ಆಡಳಿತ ಮಂಡಳಿ ಮಾಡಿದ ಸಾಲದಿಂದ ಬ್ಯಾಂಕ್ ಸಿಬ್ಬಂದಿ ಸೀಜ್ ಮಾಡಿದ್ದು, ಮಕ್ಕಳು ಶಾಲೆಯ ಹೊರಗಡೆ ಮರದ ಕೆಳಗೆ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ.

ಈ ಸಂಸ್ಥೆಯ ಎಂ. ಸವಿತಾ, ಎಂ. ಕೃಷ್ಣಕಿಶೋರ ರೆಡ್ಡಿ, ಎಂ.ಸತ್ಯನಾರಾಯಣ ರೆಡ್ಡಿ ಹಾಗೂ ಇನ್ನಿತರರು ಹೈದರಬಾದ್‌ನ ಹಣಕಾಸು ಸಂಸ್ಥೆಯಿಂದ ಸಂಸ್ಥೆಯ ಶಾಲಾ ಕಟ್ಟಡವನ್ನು ಅಡವಿಟ್ಟು ಸಾಲ ಪಡೆದು ಕಂತುಗಳನ್ನು ಕಟ್ಟದೇ ಮತ್ತು ಸಾಲ ಮರುಪಾವತಿ ಮಾಡದ ಕಾರಣ ನ್ಯಾಯಾಲಯದಿಂದ ಆದೇಶ ತಂದು ಶಾಲಾ ಕಟ್ಟಡಕ್ಕೆ ಬೀಗ ಹಾಕಿಸಿದ್ದಾರೆ .
ಆಡಳಿತ ಮಂಡಳಿ ಹಾಗೂ ಬ್ಯಾಂಕ್‌ನವರ ವ್ಯವಹಾರದಿಂದಾಗಿ ಶಾಲೆಯ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಕ್ಕಳನ್ನು ಹೊರಗಡೆ ಕೂರಿಸದೇ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಒಂದು ವೇಳೆ ವ್ಯವಸ್ಥೆ ಮಾಡದಿದ್ದರೆ ಕ್ರಮದ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಆದರೆ ಸದ್ಯ ಮಕ್ಕಳನ್ನು ಶಾಲೆ ಪಕ್ಕದ ಮರದ ಕೆಳಗೆ ಕೂರಿಸಿ ಪಾಠ ಮಾಡಲಾಗುತ್ತಿದ್ದು, ಪೋಷಕರು ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ.

ಈ ಬಗ್ಗೆ ಶಾಲೆಯ ಬಳಿಯಿದ್ದ ಪಾಲಕರಾದ ಪ್ರಸಾದ್ ಮಾತನಾಡಿ 'ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬ್ಯಾಂಕ್‌ನವರು ಏನೇ ವ್ಯವಹಾರ ಮಾಡಿಕೊಳ್ಳಲಿ, ಅವರನ್ನು ಕರೆದುಕೊಂಡು ಹೋಗಿ ಜೈಲಿನಲ್ಲಿಯೇ ಇಡಲಿ .ಆದರೆ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆ ಆಗಬಾರದು. ಖಾಸಗಿ ಬ್ಯಾಂಕಿನಮರೇ ತಮ್ಮ ನೇತೃತ್ವದಲ್ಲಿ ಶಾಲೆ ನಡೆಸಲಿ ಆದರೆ ವಿದ್ಯಾರ್ಥಿ ಮತ್ತು ಬೋಧಕ ಸಿಬ್ಬಂದಿಗೆ ಯಾವುದೇ ತೊಂದರೆ ಆಗಬಾರದು' ಎಂದು ಆಗ್ರಹಿಸಿದ್ದಾರೆ.












Click it and Unblock the Notifications