ಸಿರುಗುಪ್ಪ: ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ, ಅಪಾಯದಿಂದ ಪಾರಾದ ವಿದ್ಯಾರ್ಥಿಗಳು
ಬಳ್ಳಾರಿ, ಜೂನ್, 06: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಸುದೀಕ್ಷಾ ಇಂಟರ್‌ನ್ಯಾಷನಲ್ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ವೇಳೆ ಸದ್ಯ ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗೆ ಹಾನಿಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಎಂದಿನಂತೆ ಮಂಗಳವಾರ (ಜೂನ್ 06) ಬೆಳಗ್ಗೆಯಿಂದ ಎಲ್ಲಾ ತರಗತಿಗಳಲ್ಲಿ ಪಾಠಗಳು ನಡೆಯುತ್ತಿದ್ದವು. ಆದರೆ ವಿದ್ಯುತ್ ಪೂರೈಕೆ ಸ್ಥಗಿತವಾದ್ದರಿಂದ ಶಾಲೆಯ ಜನರೇಟರ್ ಆನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜನರೇಟರ್ ಕೊಠಡಿಯಲ್ಲಿನ ವಿದ್ಯುತ್ ವೈರ್‌ಗಳಲ್ಲಿ ಮೊದಲು ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇನ್ನು ಜನರೇಟರ್ ಕೊಠಡಿಯಲ್ಲಿ ಹೊಗೆ ಮತ್ತು ಬೆಂಕಿ ಕಾಣುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಗಳು ತಕ್ಷಣ ಎಲ್ಲ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಕಟ್ಟಡದ ಹಿಂಬಾಗಿಲಿನಿಂದ ಸುರಕ್ಷಿತವಾಗಿ ಸುಮಾರು 150ಕ್ಕೂ ಹೆಚ್ಚು ವಿಧ್ಯಾರ್ಥಿಗಳನ್ನು ಕಟ್ಟಡದಿಂದ ಹೊರ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕೊನೆಗೆ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ.
ಹಾಗೆಯೆ ಕಾಡು ಹಾಗೂ ಹುಲ್ಲಿನ ಮೆದೆಗಳು ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಗೌರಿಕಲ್ಲು ಬೆಟ್ಟ ಎಂಬಲ್ಲಿ ಬೆಂಕಿ ಕಾಣಿಸಿಕೊಂಡು ಅಂದಾಜು 25-30 ಹೆಕ್ಟೇರ್‌ನಷ್ಟು ಕಾಡು ಸುಟ್ಟು ಕರಕಲಾಗಿತ್ತು.
ಅಗ್ನಿ ಅವಘಡ ಸಂಭವಿಸಿ ಹುಲ್ಲಿನ ಮೆದೆಗಳು ಸುಟ್ಟು ಕರಕಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ನಡೆದಿತ್ತು. ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ಬೇರೆ ಬೇರೆ ರೈತರು ಒಂದೇ ಜಾಗದಲ್ಲಿ 9 ಮೆದೆಗಳನ್ನು ಹಾಕಿದ್ದರು. ಇದರಲ್ಲಿ ಒಂದು ಮೆದೆಗೆ ಹತ್ತಿದ ಬೆಂಕಿ ಎಲ್ಲದಕ್ಕೂ ವ್ಯಾಪಿಸಿ ಭಾರಿ ನಷ್ಟ ಉಂಟಾಗಿತ್ತು. ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು. ಇನ್ನು ಈ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿತ್ತು.











Click it and Unblock the Notifications