ಭೀಮಾನಾಯ್ಕ್ ವಿರುದ್ಧ ಹಗರಿಬೊಮ್ಮನಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ
ಬಳ್ಳಾರಿ, ನವೆಂಬರ್ 11: ಪುರಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಭೀಮಾನಾಯ್ಕ್ ವರ್ತನೆಯನ್ನು ಖಂಡಿಸಿ ಬಿಜೆಪಿಯಿಂದ ಹಗರಿಬೊಮ್ಮನಹಳ್ಳಿ ಬಂದ್ ಮಾಡಲಾಗಿದೆ. ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಭೀಮಾನಾಯ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಾಸಕರ ದೌರ್ಜನ್ಯ ಮಿತಿಮೀರಿದೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ವೇಳೆ ಮಂಗಳವಾರ ತೋಳು ತಟ್ಟಿ ಜಗಳಕ್ಕೆ ಬಂದಿದ್ದ ಭೀಮಾನಾಯ್ಕ್, ಬಿಜೆಪಿ ಕಾರ್ಯಕರ್ತರ ವಿರುದ್ಧ ಹರಿಹಾಯ್ದಿದ್ದ ವಿಡಿಯೋ ವೈರಲ್ ಆಗಿತ್ತು.

ಇದನ್ನು ಖಂಡಿಸಿ ಹಗರಿಬೊಮ್ಮನಹಳ್ಳಿ ಬಂದ್ ಮಾಡಿ ಪಾದಯಾತ್ರೆಯ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಈ ರೀತಿ ವರ್ತಿಸಿದ ಶಾಸಕ ಭೀಮಾನಾಯ್ಕ್ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ, ಭೀಮಾನಾಯ್ಕ್ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಯಿಂದಲೇ ಗೂಂಡಾ ಸಾಮ್ರಾಜ್ಯ ನಿರ್ಮಾಣ"
ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಭೀಮಾನಾಯ್ಕ್, ಮರಿಯಮ್ಮನಹಳ್ಳಿ ಪ.ಪಂ.ನಲ್ಲಿ 8 ಬಿಜೆಪಿ, 8 ಕಾಂಗ್ರೆಸ್ ಇದ್ದರೂ ಕ್ರಾಸ್ ವೋಟ್ ಮಾಡಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದರು. ಅದೇ ರೀತಿ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ನಾವು ಮಾಡಿದೆವು. ಇದಕ್ಕೆ ಇಲ್ಲಸಲ್ಲದ ಆರೋಪ ಹೊರಿಸಿದರೆ ಹೇಗೆ? ಬಿಜೆಪಿಯಿಂದಲೇ ಗೂಂಡಾ ಸಾಮ್ರಾಜ್ಯ ನಿರ್ಮಾಣವಾಗುತ್ತಿರುವುದು. ಒಬ್ಬ ಶಾಸಕನಿಗೆ ಹೊಡೆಯಲು ಬಂದರೆ ಹೊಡೆಸಿಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಇಂಥ ಘಟನೆ ನಡೆದಿದೆಯಾ? ಬಿಜೆಪಿ ಸರ್ಕಾರದಲ್ಲಿ ಇಂಥ ಗಲಾಟೆ ನಡೆಯುತ್ತಿವೆ. ಹಗರಿಬೊಮ್ಮನಹಳ್ಳಿ ಸಿಪಿಐ ಮಲ್ಲಿಕಾರ್ಜುನ ಡೆಫಿನ್ ಬಿಜೆಪಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಂದಲೇ ಬಿಜೆಪಿ ಕಾರ್ಯಕರ್ತರ ಅಟೋಟೋಪ ಮಿತಿಮೀರಿದೆ ಎಂದು ಆರೋಪಿಸಿದರು.












Click it and Unblock the Notifications