ಬೇಕೇ ಬೇಕು ಬಾರ್ ಬೇಕು; ಸೋವೇನಹಳ್ಳಿಯಲ್ಲಿ ಮದ್ಯದಂಗಡಿಗೆ ಪ್ರತಿಭಟನೆ
ಬಳ್ಳಾರಿ, ಜುಲೈ 26: ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಆಗ್ರಹಿಸಿದ ಸಾವಿರಾರು ಮಹಿಳೆಯರು ರಾಜಧಾನಿಗೆ ಬರಿಗಾಲ ಹೆಜ್ಜೆ ಹಾಕಿದ್ದು ಇನ್ನೂ ಹಸಿಹಸಿಯಾಗಿದೆ. ಹೀಗಿರುವಾಗಲೇ, ಮದ್ಯದಂಗಡಿ ಬೇಕೆಂದು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿ ಶುಕ್ರವಾರ ಹೊರಬಿದ್ದಿದೆ.
ಸಾರಾಯಿಯಿಂದ ಸಂಸಾರ ನಾಶವಾಗುತ್ತಿದೆ ಎಂದು ಪಾದಯಾತ್ರೆ ಕೈಗೊಂಡ ಮಹಿಳೆಯರ ಪೈಕಿ ಬಳ್ಳಾರಿಯವರೂ ಇದ್ದರು. ಆದರೆ ಈಗ ಅದೇ ಬಳ್ಳಾರಿಯಲ್ಲಿ, ಮಹಿಳೆಯರೂ ಸೇರಿದಂತೆ, ಒಂದು ವರ್ಗ ನಮ್ಮ ಹಳ್ಳಿಗೂ ಮದ್ಯದಂಗಡಿ ಬೇಕು ಎಂದು ಒತ್ತಾಯಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮಸ್ಥರು ಸಾರಾಯಿ ಅಂಗಡಿಗಾಗಿ ಪ್ರತಿಭಟನೆ ಕೈಗೊಂಡಿದ್ದಾರೆ. ಗ್ರಾಮ ಪಂಚಾಯತಿ ಮುಂಭಾಗ ಕುಳಿತು, ನಮ್ಮ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಬೇಕು ಎಂದು ನೂರಾರು ಮಹಿಳೆಯರು ಮತ್ತು ಪುರುಷರು ಪ್ರತಿಭಟನೆ ನಡೆಸಿದ್ದಾರೆ.

ಸೋವೇನಹಳ್ಳಿ ಗ್ರಾಮದಲ್ಲಿ ಮದ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಬೇಡಿಕೆಯಂತೆ ಎಂ.ಎಸ್.ಐ.ಎಲ್, ವೈನ್ ಶಾಪ್ ಪ್ರಾರಂಭಿಸಲು ಗ್ರಾಮಸ್ಥರೊಬ್ಬರಿಗೆ ಅಬಕಾರಿ ಇಲಾಖೆ ಪರವಾನಗಿ ನೀಡಿದ್ದರು. ಆದರೆ ಗ್ರಾಮದಲ್ಲಿ ವೈನ್ ಶಾಪ್ ಪ್ರಾರಂಭಿಸಿದರೆ ಮದ್ಯವ್ಯಸನಿಗಳು ಹೆಚ್ಚಾಗುತ್ತಾರೆ ಎಂದು ಕೆಲವರು ಬಾರ್ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಎಂಎಸ್ಐಎಲ್ ಕೌಂಟರ್ ಪ್ರಾರಂಭಕ್ಕೆ ವಿಳಂಬವಾಗಿತ್ತು. ಇದರಿಂದ ಬೇಸತ್ತು ಮೊನ್ನೆ ಸಂಜೆ ಗ್ರಾಮದ ಮಹಿಳೆಯರು ಹಾಗೂ ಪುರುಷರು ಗ್ರಾಮ ಪಂಚಾಯತಿ ಮುಂಭಾಗ ಸೇರಿದರು. ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೇಕೇ ಬೇಕು ಬಾರ್ ಬೇಕು ಎಂದು ಆಕ್ರೋಶದಿಂದ ಗ್ರಾಮಸ್ಥರು ಪಟ್ಟು ಹಿಡಿದಿರುವ ದೃಶ್ಯ ಎಲ್ಲೆಲ್ಲೂ ಹರಿದಾಡುತ್ತಿದೆ.
ಇಂತಹದೊಂದು ಪ್ರತಿಭಟನೆಯನ್ನು ಪ್ರಾಯೋಜಿಸಿದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಲ್ಲದಿದ್ದರೂ, ಜನರ ಆಗ್ರಹಗಳಿಗೆ ಪ್ರತಿರೋಧವನ್ನು ಹೇಗೆ ಹುಟ್ಟುಹಾಕಲಾಗುತ್ತದೆ ಎಂಬುದಕ್ಕೆ ಜನರ ಈ ನಡವಳಿಕೆ ನಿದರ್ಶನವಾಗಿ ಕಣ್ಮುಂದಿದೆ.












Click it and Unblock the Notifications