ಪೂರ್ವ ಮುಂಗಾರು ಮಳೆ: ಬಳ್ಳಾರಿಯಲ್ಲಿ ಕೃಷಿ ಚಟುವಟಿಕೆ ಚುರುಕು
ಬಳ್ಳಾರಿ, ಮೇ 27: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ರೈತರು ಸಂತಸಗೊಂಡಿದ್ದಾರೆ. ಮುಂಗಾರು ಅವಧಿಯ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬಿತ್ತನೆಯನ್ನು ಆರಂಭಿಸಲಿದ್ದಾರೆ. ಕೃಷಿ ಇಲಾಖೆ ಸಹ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ರೈತರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮಗಳನ್ನು ಕೈಗೊಂಡಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ಆದ್ದರಿಂದ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಮಳೆಯು ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಲು ಸಜ್ಜಾಗಿದೆ.

ಉತ್ತಮವಾದ ಮಳೆ ಹಿನ್ನಲೆಯಲ್ಲಿ ರೈತರು ಕೃಷಿ ಭೂಮಿ ಹದಗೊಳಿಸುವ ಕಾರ್ಯಗಳಲ್ಲಿ ತೊಡಗಿದ್ದಾರೆ. ರಂಟೆ-ಕುಂಟೆ ಹೊಡೆಯುವುದು, ಎತ್ತುಗಳ ಮೂಲಕ ನೇಗಿಲು ಹೊಡೆಯುತ್ತಿದ್ದಾರೆ. ಟ್ರಾಕ್ಟರ್‌ಗಳನ್ನು ಬಳಕೆ ಮಾಡಿಕೊಂಡು ಸಹ ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ವಾರ್ಷಿಕ 599.5 ಮಿ. ಮೀ. ವಾಡಿಕೆ ಮಳೆಯಾಗಬೇಕಿದೆ. ಕಳೆದ ವರ್ಷ ಮೇ 20 ರವರೆಗೆ 53.6 ಮಿ. ಮೀ. ಮಳೆಯಾಗಿತ್ತು. ಪ್ರಸ್ತುತ ವರ್ಷ 88.4 ಮಿ. ಮೀ. ಮಳೆಯಾಗಿದ್ದು ಸುಮಾರು ಶೇ .64 ರಷ್ಟು ಮಳೆ ಹೆಚ್ಚಾಗಿ ಸುರಿದಿದೆ.
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1,63,753 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಿದ್ದು, ಭತ್ತ 89,000 ಹೆಕ್ಟೇರ್, ಮೆಕ್ಕೆಜೋಳ 20,000, ಹತ್ತಿ 35,000, ತೊಗರಿ 4,500, ಜೋಳ 5,000, ಶೇಂಗ 2,500, ತೃಣಧಾನ್ಯಗಳು 2,300, ಸೂರ್ಯಕಾಂತಿ 1,000 ಮತ್ತು ಕಬ್ಬು 1000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ.
ಕೃಷಿ ಇಲಾಖೆ ಜಿಲ್ಲೆಯ 13 ರೈತ ಸಂಪರ್ಕ ಕೇಂದ್ರ ಮತ್ತು 2 ಹೆಚ್ಚುವರಿ ಕೇಂದ್ರ ಸೇರಿ ಒಟ್ಟು 15 ಕೇಂದ್ರಗಳ ಮೂಲಕ ವಿವಿಧ ಬೆಳೆಯ ಬಿತ್ತನೆ ಬೀಜಗಳನ್ನು ಸಹಾಯಧನದಡಿ ವಿತರಿಸಲು ವ್ಯವಸ್ಥೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಪಕವಾಗಿದ್ದು, ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಆಭಾವದ ಬಗ್ಗೆ ಯಾವುದೇ ಅತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಮುಂಗಾರು ಹಂಗಾಮಿಗೆ ಒಟ್ಟು 1,08,100 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಪ್ರಸ್ತುತ 40,228 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಹಂತ ಹಂತವಾಗಿ ಬೇಡಿಕೆ ಅನುಗುಣವಾಗಿ ಉಳಿದ ರಸಗೂಬ್ಬರ ಕಾಲಕಾಲಕ್ಕೆ ಸರಬರಾಜು ಆಗಲಿದೆ. ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 11766 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 11800 ಕ್ವಿಂಟಾಲ್ ಲಭ್ಯವಿದೆ.
ಜಿಲ್ಲೆಯಲ್ಲಿ ಕೃಷಿ ಪರಿಕರಗಳ ಪರಿವೀಕ್ಷರ ತಂಡಗಳನ್ನು ರಚಿಸಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಗುಣಮಟ್ಟ ಹಾಗೂ ಬೆಲೆ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನೇ ಮಾರಾಟ ಮಾಡಬೇಕು ತಪ್ಪಿದಲ್ಲಿ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
"ರೈತರು ಅಧಿಕೃತ ಪರಿಕರ ಮಾರಾಟಗಾರರಿಂದಲೇ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕು. ಖರೀದಿ ಮಾಡಿದ ಬಿಲ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು" ಎಂದು ಜಂಟಿ ಕೃಷಿ ನಿರ್ದೇಶಕ ಟಿ. ಸೋಮ ಸುಂದರ್ ಹೇಳಿದ್ದಾರೆ.












Click it and Unblock the Notifications