ಫೆ. 26ಕ್ಕೆ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕ; ಸಿದ್ಧತೆಗಳು ಹೇಗಿವೆ?
ಬಳ್ಳಾರಿ, ಫೆಬ್ರವರಿ 25; ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಮತ್ತು ಕಾರ್ಣಿಕೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಫೆಬ್ರವರಿ 26 ರಂದು ಕಾರ್ಣಿಕೋತ್ಸವ ನಡೆಯಲಿದೆ. ಇದನ್ನು ಕೇಳಲು ಕರುನಾಡೇ ತುದಿಗಾಲಿನಲ್ಲಿ ನಿಂತಿದೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಮತ್ತ ಕಾರ್ಣಿಕೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಪ್ರತಿ ವರ್ಷಕ್ಕಿಂತ ಹೆಚ್ಚಿನ ಜನರು ಈ ಬಾರಿ ಸೇರುವ ನಿರೀಕ್ಷೆ ಇದೆ. ಆದ್ದರಿಂದ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾರ್ಣಿಕೋತ್ಸವಕ್ಕಾಗಿ ಫಾಗಿಂಗ್ ಮತ್ತು ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಡೆಂಕನಮರಡಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಕಾರ್ಣಿಕ ನುಡಿ: ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವ ಹಾಗೆ ಧ್ವನಿವರ್ಧಕ ವ್ಯವಸ್ಥೆ ಮತ್ತು ಕಾರ್ಣಿಕ ನುಡಿಯನ್ನು ಸೆರೆ ಹಿಡಿಯಲು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಲಾಗುತ್ತಿದೆ. ರೆಕಾರ್ಡ್ ಮಾಡಲಾದ ಕಾರ್ಣಿಕ ನುಡಿಯನ್ನು ರಾಜ್ಯದ ಮುಖ್ಯ ವಾಹಿನಿಗಳಲ್ಲಿ, ದಿನ ಪತ್ರಿಕೆಗಳಲ್ಲಿ ವಿವಿಧ ಮಾಧ್ಯಮದ ಮೂಲಕ ಪ್ರಚಾರಪಡಿಸಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವರ್ಷದಂತೆ ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ವ್ಯವಸ್ಥೆಗಾಗಿ ತುಂಗಭದ್ರಾ ನದಿಗೆ ನೀರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ನೀರು ನದಿಯಲ್ಲಿ ಹರಿಯುತ್ತಿದೆ. ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ಜಿಲ್ಲಾಡಳಿತ ಜೊತೆ ಸಹಕಾರ ನೀಡಬೇಕು ಎಂದು ವಿಜಯನಗರ ಜಿಲ್ಲಾಡಳಿತ ಮನವಿ ಮಾಡಿದೆ.
ನಾಡಿನ ಮಳೆ, ಬೆಳೆ ಮುಂತಾದ ಮಾಹಿತಿಯನ್ನು ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಹೇಳಲಾಗುತ್ತದೆ. ಕಾರ್ಣಿಕ ನುಡಿದ ಬಳಿಕ ಅದರ ಅರ್ಥವೇನು? ಎಂದು ದೇವಾಲಯದಿಂದ ಅಧಿಕೃತವಾಗಿ ತಿಳಿಸಲಾಗುತ್ತದೆ. ರಾಜ್ಯಾದ್ಯಂತ ಈ ಕಾರ್ಣಿಕ ಕುತೂಹಲ ಮೂಡಿಸಿದೆ.
ಕಾರ್ಣಿಕೋತ್ಸವ ನಡೆಯುವ ಸ್ಥಳ ಡೆಂಕನ ಮರಡಿ. ಇಲ್ಲಿ ಮುಂಚಿತವಾಗಿ ಬ್ಯಾರಿಕೇಡ್ ಅಳವಡಿಕೆ ಹಾಗೂ ಗಣ್ಯರು ಮತ್ತು ಅತಿಮುಖ್ಯ ವ್ಯಕ್ತಿಗಳ ವಾಹನಗಳು ತೆರಳಲು ಸೂಕ್ತ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ತಾತ್ಕಾಲಿಕ ಶೌಚಾಲಯ ನಿರ್ಮಾಣ, ಜಾತ್ರಾ ಮಹೋತ್ಸಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆರೋಗ್ಯ ಸೇವೆ, ಕುಡಿಯುವ ನೀರು, ನೈರ್ಮಲೀಕರಣ ವ್ಯವಸ್ಥೆಗೆ ಸಹ ತಂಡಗಳನ್ನು ರಚನೆ ಮಾಡಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಈ ಬಾರಿ 'ಶಕ್ತಿ' ಯೋಜನೆಯಡಿ ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಇರುವ ಕಾರಣ ಸುಮಾರು 20 ಲಕ್ಷ ಭಕ್ತರು ಕಾರ್ಣಿಕೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ವಿವಿಧ ಭಾಗಗಳಿಂದ ಭಕ್ತರು ಆಗಮಿಸಲು ಮತ್ತು ತೆರಳಲು ಹೆಚ್ಚುವರಿ ಬಸ್ ಸೌಲಭ್ಯವನ್ನು ಸಹ ಮಾಡಲಾಗಿದೆ.
ಕಾರ್ಣಿಕೋತ್ಸವ ಜರುಗುವ ಡೆಂಕನ ಮರಡಿಯಲ್ಲಿ ಕಾರ್ಣಿಕ ನುಡಿ ಭಕ್ತಾದಿಗಳಿಗೆ ತಲುಪಲು ಸೂಕ್ತ ಧ್ವನಿವರ್ಧಕ ಅಳವಡಿಸಲಾಗಿದೆ. ಕಾರ್ಣಿಕ ನುಡಿಯ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಗಣೇಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜಿಗಣೇಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಭಾನುವಾರ ಮಧ್ಯಾಹ್ನ 2 ಗಂಟೆಗೆ ನೆರವೇರಿತು. ಕಳೆದ ಎಂಟು ದಿನಗಳಿಂದ ಕಾರ್ಣಿಕ ನುಡಿಯುವ ಗಣಮಗ ಜಿಗಣೇಹಳ್ಳಿ ಮಂಜುನಾಥ್ ದೇವಸ್ಥಾನದ ಆವರಣದಲ್ಲಿರುವ ಬಿಲ್ವಪತ್ರೆ ಮರದಡಿಯಲ್ಲಿ ಹಾಕಲಾಗಿದ್ದ ಹಸಿರು ಚಪ್ಪರದಲ್ಲಿ ಉಪವಾಸ ವ್ರತ ಕೈಗೊಂಡಿದ್ದರು.
ಭಾನುವಾರ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ನಂತರ ಹೊಳೆಪೂಜೆ ನಡೆದು ಕಾರ್ಣಿಕದ ಬಿಲ್ಲನೇರಿದ ಗಣಮಗ ಸದ್ದಲೇ ಎಂದು ಕೂಗಿದಾಗ ಮೌನ ಆವರಿಸಿತು. 'ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಫರಾಕ್' ಎಂದು ಎಂದು ಗಣಮಗ ಕಾರ್ಣಿಕ ನುಡಿದರು.
ಕಾರ್ಣಿಕವನ್ನು ಪೂರ್ತಿಯಾಗಿ ಬಳಿಕ ಬಿಡಿಸಿ ಹೇಳಲಾಗಿದ್ದು, ಈ ವರ್ಷ ಮಳೆ ಬೆಳೆ ಸಮೃದ್ಧವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಮಲ ಪಕ್ಷ ಮತ್ತೆ ಅರಳುತ್ತದೆ ಎಂದು ಕೆಲ ಸ್ಥಳೀಯರು ವಿಶ್ಲೇಷಿಸಿದರು.












Click it and Unblock the Notifications