ಬೇಲ್ ಮೇಲೆ ಹೊರಗಿದ್ದವರು ಸಾಚ ಥರಾ ಮಾತಾಡ್ತಾರೆ, ಯಾವೋ ಇವೆಲ್ಲ? ಸೋನಿಯಾ, ರಾಹುಲ್, ಡಿ.ಕೆ.ಶಿಗೆ ಮಾತಿನಲ್ಲೇ ತಿವಿದ ಜೆ.ಪಿ.ನಡ್ಡಾ
ಬಳ್ಳಾರಿ, ಮೇ, 08: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೇಲ್ ಮೇಲೆ ಹೊರಗಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಾಂಗ್ರೆಸ್ ನಾಯಕರ ವಿರುದ್ಧ ಸಿರುಗುಪ್ಪದಲ್ಲಿ ಅಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಪರ ಆಯೋಜಿಸಲಾದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಗೂಬೆ ಕೂಡಿಸುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಬಡವರಿಗೆ 5 ಕೆ.ಜಿ. ಅಕ್ಕಿ, 5 ಕೆ.ಜಿ. ಸಿರಿಧಾನ್ಯ, ಹಾಲು ಉಚಿತವಾಗಿ ನೀಡಲಿದ್ದೇವೆ. ಪ್ರಧಾನಮಂತ್ರಿ ಮೋದಿಜಿಯವರು ರೈತರ ಮತ್ತು ಬಡವರ ಏಳಿಗೆಗಾಗಿ ಕೃಷಿ ಸಮ್ಮಾನ್, ಆಯುಷ್ಮಾನ್ ಕಾರ್ಡ್, ನರೇಗಾ ಮುಂತಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದಾರೆ. ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ ಮೇ 10ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಮಲದ ಗುರುತಿಗೆ ನಿಮ್ಮ ಮತ ನೀಡಿ ಸೋಮಲಿಂಗಪ್ಪ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿಗೌಡ, ಪಂಪನಗೌಡ, ಯುವ ಮೋರ್ಚ ತಾಲೂ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಮುಖಂಡರಾದ ಕುಂಟ್ನಾಳ್ ಮಲ್ಲಿಕಾರ್ಜುನ, ಎಂ.ಎಸ್. ವೆಂಕಟಪ್ಪನಾಯಕ, ಡಿ.ಸೋಮಪ್ಪ, ಬಿ.ದೊಡ್ಡಯ್ಯ ಹಾಗೂ ಸಾವಿರಾರು ಜನ ಕಾರ್ಯಕರ್ತರು ಭಾಗಿಯಾಗಿದ್ದರು.
ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಇನ್ನು ಇತ್ತೀಷೆಗಷ್ಟೇ ಹೊಸಪೇಟೆ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವೈಭವ ಶಾಲಿ ವಿಜಯನಗರ ಸಾಮ್ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು ಎನ್ನುವ ಮೂಲಕ ಕನ್ನಡದಲ್ಲೇ ಭಾಷಣವನ್ನು ಪ್ರಾರಂಭಿಸಿದ್ದರು.
ಹಂಪಿ ವಿರೂಪಾಕ್ಷ, ಉಗ್ರ ನರಸಿಂಹ ಸ್ವಾಮಿ, ಹುಲಿಗೆಮ್ಮ ದೇವಿಗೆ ಪ್ರಣಾಮ. ಇಂದೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದ ನಿಷೇಧ ಮಾಡುವ ಭರವಸೆ ನೀಡಿದ್ದು, ಇದು ದೌರ್ಬಗ್ಯ ಆಗಿದೆ. ಮೊದಲು ಶ್ರೀರಾಮನನ್ನು ಬಂಧಿಸಿ ಇಟ್ಟಿದ್ದರು. ಶ್ರೀರಾಮ ಹಾಗೂ ಹನುಮಂತನನ್ನು ಕಂಡರೇ ಕಾಂಗ್ರೆಸ್‌ಗೆ ಆಗಲ್ಲ. ಈಗ ಅವರಿಗೆ ಜೈ ಭಜರಂಗಿ ಎನ್ನುವ ಜನರಿಂದ ಸಮಸ್ಯೆ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡುವುದು ನಮ್ಮ ಸಂಕಲ್ಪವಾಗಿದೆ. ಸಂಕಲ್ಪಕ್ಕೆ ಪ್ರಭು ಹನುಮಾನ್ ಆಶೀರ್ವಾದ ಕೇಳಲು ಬಂದಿದ್ದೇವೆ. ಅಲ್ಲದೆ ಬಿಜೆಪಿ ಪ್ರಣಾಳಿಕೆ ಅಭಿವೃದ್ಧಿ ಪೂರಕ ಭರವಸೆ ನೀಡಿದೆ. ಯಾವುದೇ ಕಾರಣಕ್ಕೆ ಕರ್ನಾಟಕ ಘನತೆ, ಮಾನ ಮಾರ್ಯಾದೆಗೆ ಧಕ್ಕೆ ಬರದ ರೀತಿಯಲ್ಲಿ ನಾವು ನಡೆದುಕೊಳ್ಳುತ್ತೇವೆ ಎಂದಿದ್ದರು.
ಹಂಪಿಯು ಭಾರತ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್ ಗುಲಾಮರ ಗಿರಿಯ ಮಾನಸಿಕತೆಯಿಂದ ಕೂಡಿದೆ. ಕಾಂಗ್ರೆಸ್ ಸರರ್ಕಾರ ಹಂಪಿಯ ಇತಿಹಾಸ, ಪರಂಪರೆಗೆ ಮಹತ್ವ ಕೊಡಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ಹಂಪಿ ರಥದ ಚಿತ್ರವನ್ನು 50 ರೂಪಾಯಿ ನೋಟ್ ಮೇಲೆ ಮುದ್ರಿಸಿದ್ದೇವೆ. ಕೇಂದ್ರ ಸ್ವದೇಶಿ ದರ್ಶನ ಯೋಜನೆಯಲ್ಲಿ ಹಂಪಿ ಸೇರ್ಪಡೆ ಮಾಡಿದ್ದೇವೆ. ಪ್ರವಾಸಿ ತಾಣಗಳ ಯೋಜನೆಯಲ್ಲಿ ಹಂಪಿ, ಬದಾಮಿ, ಪಟ್ಟದಕಲ್ಲು, ವಿಜಯಪುರ ಸೇರಿದೆ ಎಂದಿದ್ದರು.












Click it and Unblock the Notifications