Anil Lad Quits JDS: ಅನಿಲ್ ಲಾಡ್‌ಗೆ ಟಿಕೆಟ್ ನೀಡಿದ ಜೆಡಿಎಸ್: ಪಕ್ಷ ತೊರೆದ ಮುನ್ನಾಬಾಯಿ
ಬಳ್ಳಾರಿ, ಏಪ್ರಿಲ್ 21: ಜೆಡಿಎಸ್ ಮುಖಂಡ ಮುನ್ನಾಬಾಯಿ ಜೆಡಿಎಸ್‌ಗೆ ಗುಡ್ ಬೈ ಹೇಳಿ, ಗಾಲಿ ಜನಾರ್ಧನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಶುಕ್ರವಾರ ಸಂಜೆ ಸೇರ್ಪಡೆಯಾಗಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದ ಬಿ ಫಾರಂ ಪಡೆದು ನಂತರ ನಡೆದ ಅನಿರೀಕ್ಷಿತ ಬೆಳವಣಿಗೆಗಳಿಂದ ಟಿಕೆಟ್ ವಂಚಿತರಾದ ಮುನ್ನಾಬಾಯಿ ಜೆಡಿಎಸ್ ಮುಖಂಡರ ಮೇಲೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶುಕ್ರವಾರ ಸಂಜೆ ಜೆಡಿಎಸ್ ಪಕ್ಷ ತೊರೆದು ಬಳ್ಳಾರಿ ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರ ಸಮ್ಮುಖದಲ್ಲಿ ಕೆಆರ್‌ಪಿಪಿ ಸೇರ್ಪಡೆಯಾಗಿದ್ದಾರೆ.

ಮುನ್ನಾಬಾಯಿ ಅವರಿಗೆ ಏಪ್ರಿಲ್ 18ರಂದು ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿದ್ದರು. ಆದರೆ ನಂತರ ಮಾಜಿ ಶಾಸಕ ಅನಿಲ್ ಲಾಡ್ ಜೆಡಿಎಸ್ ಸೇರ್ಪಡೆಯಾಗಿ ಬಳ್ಳಾರಿ ನಗರದಿಂದ ಸ್ಪರ್ಧಿಸಲು ಬಿ ಫಾರಂ ಪಡೆದರು. ಇದರಿಂದ ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶಗೊಂಡಿರುವ ಮುನ್ನಾಬಾಯಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರುವ ಮುನ್ನಾ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನ್ನಾಬಾಯಿ, ನನಗೆ ಏಪ್ರಿಲ್ 18 ರಂದು ಮಧ್ಯಾಹ್ನ ಜೆಡಿಎಸ್ ಬಿ ಫಾರಂ ನೀಡಿದರು. ಆದರೆ ಅಂದೇ ರಾತ್ರಿ ಅನಿಲ್ ಲಾಡ್ ಬಿ ಫಾರಂ ನೀಡಿದ್ದಾರೆ. 2013ರಲ್ಲಿ ನಾನು ಬಳ್ಳಾರಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. 2018 ರಲ್ಲಿ ಕುಮಾರಣ್ಣನವರ ಮಾತಿಗೆ ಗೌರವ ಕೊಟ್ಟು ಗಣಿ ಮಾಲೀಕರಿಗೆ ಜೆಡಿಎಸ್ ಟಿಕೆಟ್ ಬಿಟ್ಟು ಕೊಟ್ಟೆ ಎಂದರು.
ಮಾತು ಮುಂದುವರಿಸಿದ ಮುನ್ನಾಬಾಯಿ, ಈಗ ಮತ್ತೆ ನನ್ನ ಬದಲಿಗೆ ಗಣಿ ಮಾಲೀಕ ಅನಿಲ್ ಲಾಡ್‌ಗೆ ಟಿಕೆಟ್ ನೀಡಿದ್ದಾರೆ. ಟಿಕೆಟ್ ಪಡೆದ ಅನಿಲ್ ಲಾಡ್ ಸೌಜನ್ಯಕ್ಕಾದರೂ ನನ್ನ ಭೇಟಿಯಾಗಿಲ್ಲ. ಪಕ್ಷದಲ್ಲಿ ನನಗೆ ಆಗುತ್ತಿರುವ ಅನ್ಯಾಯವನ್ನು ಧಿಕ್ಕರಿಸಿ ನಾನು ಜೆಡಿಎಸ್ ತೊರೆದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರುತ್ತಿದ್ದೇನೆ ಎಂದು ಹೇಳಿದರು.

ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಅಸಮಾಧಾನಗೊಂಡಿದ್ದ ಅನಿಲ್ ಲಾಡ್, ಏಪ್ರಿಲ್ 19 ತಡರಾತ್ರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಅನಿಲ್ ಲಾಡ್ ಕಳೆದ ಮಂಗಳವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷಕ್ಕೆ ದಿಢೀರ್ ಸೇರ್ಪಡೆಯಾಗಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಅನಿಲ್ ಲಾಡ್‌ಗೆ ಜೆಡಿಎಸ್ ಮುಖಂಡರು ಟಿಕೆಟ್ ನೀಡಿದ್ದರು.












Click it and Unblock the Notifications