ಕರ್ನಾಟಕ ಚುನಾವಣೆ; ಬಳ್ಳಾರಿ ಜಿಲ್ಲೆಯಲ್ಲಿ 11,40,899 ಮತದಾರರು
ಬಳ್ಳಾರಿ, ಮಾರ್ಚ್ 29; ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ 2023ರ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 5 ವಿಧಾನಸಭಾ ಮತಕ್ಷೇತ್ರಗಳಿವೆ. ಜಿಲ್ಲೆಯಲ್ಲಿ 5,61,718 ಪುರುಷ ಮತದಾರರು, 5,79,012 ಮಹಿಳಾ ಮತದಾರರು, 169 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 11,40,899 ಮತದಾರರು ಇದ್ದಾರೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 13 ರಿಂದ 20ರ ತನಕ ಅವಕಾಶವಿದೆ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಮೇ 15ರವೆಗೆ ಜಾರಿಯಲ್ಲಿರುತ್ತದೆ ಎಂದರು.

ಐದು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸಹಾಯಕ ಚುನಾವಣಾಧಿಕಾರಿಗಳಾಗಿದ್ದಾರೆ. ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆಯು ಜಾರಿಯಲ್ಲಿದ್ದು, ಹೊಸದಾಗಿ ಹೆಸರು ನೋಂದಾವಣಿ ಮಾಡಲು ಏಪ್ರಿಲ್ 11ರವರೆಗೆ ಅರ್ಜಿಯನ್ನು ಸ್ವೀಕರಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.
ಕ್ಷೇತ್ರಗಳು ಮತ್ತು ಮತದಾರರು: ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 5 ವಿಧಾನಸಭಾ ಮತಕ್ಷೇತ್ರಗಳಿವೆ. ಇವುಗಳಲ್ಲಿ ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಗ್ರಾಮೀಣ ಹಾಗೂ ಸಂಡೂರು ಪರಿಶಿಷ್ಟ ಪಂಗಡ ಮೀಸಲು ಮತಕ್ಷೇತ್ರಗಳಿದ್ದು, ಬಳ್ಳಾರಿ ನಗರ ಕ್ಷೇತ್ರವು ಇತರೆ ಮೀಸಲು ಕ್ಷೇತ್ರವಾಗಿದೆ.

ಜಿಲ್ಲೆಯಲ್ಲಿ 5,61,718 ಪುರುಷ ಮತದಾರರು, 5,79,012 ಮಹಿಳಾ ಮತದಾರರು, 169 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 11,40,899 ಮತದಾರರು ಇದ್ದಾರೆ. ಜಿಲ್ಲೆಯ ಒಟ್ಟು ಚುನಾವಣಾ ಜನಸಂಖ್ಯೆ ಸರಾಸರಿಗೆ ಶೇ. 63.46ರಷ್ಟು ಮತದಾರರು ಇದ್ದಾರೆ. ಇದು ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಹೆಚ್ಚಳವಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ 16,827 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು ಮತ್ತು 14, 871 ಜನ ವಿಶೇಷ ಚೇತನ ಮತದಾರರಿದ್ದಾರೆ. ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ವಿಶೇಷ ಚೇತನರು ಮತದಾನದಿಂದ ಹೊರಗುಳಿಯಬಾರದೆಂದು ಮನೆಯಿಂದಲೇ ಮತದಾನ ಮಾಡಲು ಅಂಚೆ ಮತದಾನವನ್ನು ಇದೇ ಮೊದಲ ಬಾರಿ ಪರಿಚಯಿಸಿದೆ.
ಜಿಲ್ಲೆಯಲ್ಲಿ ಈ ಬಾರಿ 34,265 ಯುವ ಮತದಾರರು ನೋಂದಣಿಯಾಗಿದ್ದಾರೆ. ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯು ಅತಿಹೆಚ್ಚು ಯುವ ಮತದಾರರನ್ನು ನೋಂದಾಯಿಸಿದ ಪ್ರಥಮ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1191 ಚುನಾವಣಾ ಮತಗಟ್ಟೆಗಳಿವೆ. ಚುನಾವಣಾ ಆಯೋಗವು ಸಹ ಹೊಸ ಮತಯಂತ್ರಗಳ ಬಳಕೆಗೆ ಸಜ್ಜಾಗಿದೆ. ಹೈದರಾಬಾದ್ ಮೂಲದ ಇಸಿಐಎಲ್ ಹೊಸ ಮತ ಯಂತ್ರಗಳನ್ನು ತಯಾರಿಸಿದೆ.
ಬಳ್ಳಾರಿ ಜಿಲ್ಲೆಯ ಮತಗಟ್ಟೆಗಳಿಗೆ ಅವಶ್ಯವಿರುವ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿವಿ ಪ್ಯಾಟ್)ಗಳು ಸರಬರಾಜು ಆಗಿದ್ದು, ಇವಿಎಂಗಳನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ತಂತ್ರಜ್ಞರಿಂದ ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಪ್ರಥಮ ಹಂತದ ಪರಿಶೀಲನೆ ಮಾಡಲಾಗಿದೆ. ಈ ನೂತನ ಮತ ಯಂತ್ರಗಳಲ್ಲಿ ಮತದಾರರು ಮತ ಚಲಾಯಿಸಿದಾಗ ಅಭ್ಯರ್ಥಿಯ ಫೋಟೋ ಕಾಣಿಸಲಿದೆ.
ಚುನಾವಣೆ ಅಕ್ರಮ ತಡೆ; ಚುನಾವಣೆ ದಿನಾಂಕ ಘೋಷಣೆ ಬಳಿಕ ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ತಡೆಯಲು 5 ಮತಕ್ಷೇತ್ರಗಳಿಗೆ ಒಟ್ಟು 24 ಚೆಕ್‍ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಪ್ರತಿ ಚೆಕ್‍ಪೋಸ್ಟ್‌ನಲ್ಲಿ 3 ಎಸ್‍ಎಸ್‍ಟಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಫ್ಲೈಯಿಂಗ್ ಸ್ಕ್ವ್ಯಾಡ್ ಮತ್ತು ವಿಡಿಯೋ ಕಣ್ಗಾವಲು ತಂಡಗಳನ್ನೂ ಕೂಡ ನೇಮಕ ಮಾಡಲಾಗಿದೆ.
ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೆ ಜನರು ಸಿ.ವಿಸಲ್ ಅಪ್ಲಿಕೇಶನ್ ಬಳಸಿ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಈ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.












Click it and Unblock the Notifications