ಗರ್ಭಿಣಿಯರು ಪದೇ ಪದೇ ಸ್ಕ್ಯಾನಿಂಗ್ ಮಾಡಿಸುವುದು ಸರಿಯೇ?: ವೈದ್ಯರು ಹೇಳೋದೇನು?
ಬಳ್ಳಾರಿ, ಜುಲೈ. 26: ಗರ್ಭಿಣಿಯರು ಪದೇ ಪದೇ ಸ್ಕ್ಯಾನಿಂಗ್ ಮಾಡಿಸುತ್ತಲೆ ಇರುತ್ತಾರೆ. ಆದರೆ, ಇದು ಸರಿಯೇ ತಪ್ಪೇ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಸಾರ್ವಜನಿಕರು ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಸಲಹೆ ನೀಡಿದ್ದಾರೆ.
ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಜಿಲ್ಲೆಯಾದ್ಯಂತ ಗಂಡಾಂತರ ಗರ್ಭೀಣಿಯರ ಆರೋಗ್ಯ ತಪಾಸಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಖುದ್ದು ಗರ್ಭಿಣಿಯರ ತಪಾಸಣೆ ಕೈಗೊಂಡು ಅವರ ಆರೋಗ್ಯ ತಪಾಸಣೆ ನಡೆಸಿ ಮಾತುಕತೆ ನಡೆಸಿದ್ದಾರೆ.

ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು. ಗರ್ಭಿಣಿಯಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ್ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕಾö್ಯನಿಂಗ್ ಮಾಡಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಮತ್ತು ಸಿಬ್ಬಂದಿಯಿಂದ ಉಚಿತ ಹೆರಿಗೆ ಸೇವೆ ನೀಡಲಾಗುತ್ತಿದೆ. ಜೊತೆಗೆ ಮಗುವನ್ನು ಬೆಚ್ಚಗಿನ ವಾತಾವರಣ ಕಲ್ಪಿಸಲು ಆಸ್ಪತ್ರೆಗಳಲ್ಲಿ 'ಬೇಬಿ ವಾರ್ಮರ್' ಸೌಲಭ್ಯ ಸಹಿತ ಇದ್ದು, ಮಗುವಿನ ಅಗತ್ಯ ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗರ್ಭೀಣಿಯರು ಪ್ರತಿದಿನ ಸ್ಥಳೀಯವಾಗಿ ದೊರಕುವ ತರಕಾರಿ, ಹಸಿರು ತಪ್ಪಲು ಪಲ್ಯ, ಬೇಳೆಕಾಳು, ಮೊಳಕೆ ಕಾಳು, ಹಾಗೂ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆ ಸೇವಿಸಬೇಕು. ತಾಯಿಯ ಆರೋಗ್ಯದ ಪರೀಕ್ಷೆಗಳನ್ನು ಕೈಗೊಂಡಾಗ ಕಂಡುಬರುವ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಪಡೆಯಬೇಕು ಎಂದು ವಿನಂತಿಸಿದ್ದಾರೆ.

ಗರ್ಭಿಣಿಯರ ಸ್ಕ್ಯಾನಿಂಗ್
ಗರ್ಭಿಣಿಯೆಂದು ತಿಳಿದ ನಂತರ ವೈದ್ಯರ ಸಲಹೆಯಂತೆ, ಎರಡುವರೆ ತಿಂಗಳಿನಿಂದ ಮೂರುವರೆ ತಿಂಗಳು ಅವಧಿಯಲ್ಲಿ ಸಹಜವಾಗಿ ಮೊದಲ ಬಾರಿ, ನಾಲ್ಕುವರೆ ತಿಂಗಳಿನಿಂದ ಐದುವರೆ ತಿಂಗಳಿನಲ್ಲಿ ಎರಡನೇ ಬಾರಿ, ಎಂಟುವರೆ ತಿಂಗಳಿನಿಂದ ಒಂಭತ್ತನೇಯ ತಿಂಗಳಿನಲ್ಲಿ ಮೂರನೆಯ ಬಾರಿ ಸ್ಕ್ಯಾನಿಂಗ್ ಮಾಡಿಸಬೇಕು. ಒಂದು ವೇಳೆ ತೀರ ಅಗತ್ಯವೆನಿಸಿದಲ್ಲಿ ಮಾತ್ರ ತಜ್ಞರ ಸಲಹೆಯಂತೆ ಹೆಚ್ವುವರಿಯಾಗಿ ಸ್ಕ್ಯಾನಿಂಗ್ ಮಾಡಿಸಬೇಕು. ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು ಎಂದು ತಿಳಿಸಿದ್ದಾರೆ.
ಗಂಡಾಂತರ ಗರ್ಭಿಣಿಯರು ಯಾರು?
ಗಂಡಾಂತರ ಗರ್ಭಿಣಿಯೆಂದು ನಿರ್ಧರಿಸುವ ಅಂಶಗಳಾದ 18 ವರ್ಷಕ್ಕಿಂತ ಮೊದಲು ಅಥವಾ 30 ವರ್ಷ ವಯಸ್ಸಿನ ನಂತರ ಗರ್ಭಿಣಿಯಾದರೆ, ರಕ್ತದಲ್ಲಿ ಕಬ್ಬಿಣಾಂಶ 9 ಕ್ಕಿಂತ ಕಡಿಮೆ, ಎತ್ತರ 142 ಸೆಂ.ಮೀ ಗಿಂತ ಕಡಿಮೆ, ರಕ್ತದೊತ್ತಡ 140/90 ಗಿಂತ ಹೆಚ್ಚು, ಅವಳಿ-ಜವಳಿ ಗರ್ಭಿಣಿ, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ವೈದ್ಯರ ಸಲಹೆ ಪಡೆಯಬೇಕು.
ಇನ್ನು, ಹೆಚ್‌ಐವಿ, ಹೆಚ್‌ಬಿಎಸ್‌ಎಸಿಜಿ, ಮುರ್ಛೆರೋಗ, ಥೈರಾಯ್ಡ್, ಹೈಪೊಥೈರಾಯ್ಡ್, ರಕ್ತ ಸಂಬಂಧಿತ ಖಾಯಿಲೆಗಳಿದ್ದಲ್ಲಿ, ಗರ್ಭಕೋಶದ ಬೆಳವಣಿಯ ತೊಂದರೆ, ಸ್ಕ್ಯಾನಿಂಗ್‌ನಲ್ಲಿ ಮಗು ಅಡ್ಡಲಾಗಿ ಇರುವುದು ಕಂಡುಬಂದಲ್ಲಿ, ಮಾಸದ ಸ್ಥಳದ ಅಡಚಣೆ (ಪ್ಲಸೇಂಟಾ ಪ್ರಿವಿಯಾ) ಮುಂತಾದ ತೊಂದರೆಗಳು ಇರುವವರು ವೈದ್ಯರ ನಿರ್ದೇಶನ ಮೇರೆಗೆ ಸ್ಥಳಿಯ ವೈದ್ಯಕೀಯ ಸಿಬ್ಬಂದಿ ಸಲಹೆಯಂತೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications