ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು
ಬಳ್ಳಾರಿ, ಸೆಪ್ಟೆಂಬರ್ 06 : ಹೊಸಪೇಟೆಯಿಂದ ಕೊಟ್ಟೂರಿಗೆ ಪ್ರಯಾಣಿಕರ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಸೆಪ್ಟೆಂಬರ್ 15 ರಿಂದ ಎರಡೂ ಪಟ್ಟಣಗಳ ನಡುವೆ ರೈಲು ಓಡಿಸಲು ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಸುಮಾರು 2 ದಶಕಗಳ ನಿರಂತರ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಹರಿಹರ-ಕೊಟ್ಟೂರು ನಡುವೆ ಈಗಾಗಲೇ ಪ್ಯಾಸೆಂಜರ್ ರೈಲು ಸಂಚಾರ ನಡೆಸುತ್ತಿದೆ. ಈಗ ಹೊಸಪೇಟೆ ತನಕ ರೈಲು ಸೇವೆ ವಿಸ್ತರಣೆಯಾಗಲಿದ್ದು, ಜನರ ಬಹುದಿನ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ.
1990ರಲ್ಲಿ ಹೊಸಪೇಟೆ-ಕೊಟ್ಟೂರು-ಸ್ವಾಮಿಹಳ್ಳ ನಡುವೆ ಮೀಟರ್ ಗೇಜ್ ಹಳಿ ಇತ್ತು. ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳು ಸಂಚಾರ ನಡೆಸುತ್ತಿದ್ದವು. 1995ರಲ್ಲಿ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತನೆ ಮಾಡಲಾಯಿತು.

ಸರಕು ಸಾಗಣೆ ರೈಲುಗಳ ಸಂಚಾರ ಮುಂದುವರೆಯಿತು. ಆದರೆ, ಪ್ರಯಾಣಿಕರ ರೈಲುಗಳ ಸಂಚಾರ ಸ್ಥಗಿತವಾಯಿತು. ಸ್ಥಳೀಯರು ಈ ಕುರಿತು ಸತತ ಹೋರಾಟವನ್ನು ಮಾಡುತ್ತಾ ಬಂದರು. ಈ ಹೋರಾಟಗಳಿಗೆ ಈಗ ಫಲ ಸಿಕ್ಕಿದ್ದು, ರೈಲು ಸೇವೆ ಆರಂಭವಾಗುತ್ತಿದೆ.
ಹೊಸಪೇಟೆ-ಕೊಟ್ಟೂರು ರೈಲು ಹರಿಹರದ ತನಕ ಸಂಚಾರ ನಡೆಸಲಿದೆ. ಇದರಿಂದಾಗಿ ಶಿವಮೊಗ್ಗ, ಅರಸೀಕೆರೆ, ಹಾಸನ, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಜನರು ಸಂಚಾರ ನಡೆಸಲು ಅನುಕೂಲವಾಗಲಿದೆ. ಸಮಯ ಮತ್ತು ಹಣ ಉಳಿತಾಯವಾಗಲಿದೆ.












Click it and Unblock the Notifications