Gruha Lakshmi scheme; ನೋಂದಣಿಗೆ ಹೆಚ್ಚುವರಿ ಕೌಂಟರ್‌ಗಳು
ಬಳ್ಳಾರಿ, ಆಗಸ್ಟ್ 03; ಕರ್ನಾಟಕ ಕಾಂಗ್ರೆಸ್ ನೀಡಿರುವ 'ಗೃಹಲಕ್ಷ್ಮಿ' ಗ್ಯಾರಂಟಿ ಯೋಜನೆಯ ನೋಂದಣಿ ಕಾರ್ಯ ನಡೆಯುತ್ತಿದೆ. ಯೋಜನೆಯ ಫಲಾನುಭವಿಗಳ ನೋಂದಣಿಗಾಗಿ ಹೆಚ್ಚುವರಿ ಕೇಂದ್ರಗಳನ್ನು ತೆರದು ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ.
ಜುಲೈ 20ರ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಚಾಲನೆ ಕೊಟ್ಟಿದ್ದಾರೆ. ಉಚಿತವಾಗಿ ಫಲಾನುಭವಿಗಳ ನೋಂದಣಿ ನಡೆಯುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಈ ಯೋಜನೆ ಜಾರಿಯಾಗುತ್ತಿದೆ.

ಬಳ್ಳಾರಿ ಜಿಲ್ಲಾಡಳಿತ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಮೊಬೈಲ್ ಆಪ್ ಮೂಲಕ ಫಲಾನುಭವಿಗಳ ಅರ್ಜಿಯನ್ನು ನೋಂದಾಯಿಸಲು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಹೆಚ್ಚುವರಿ ನೋಂದಣಿ ಕೇಂದ್ರ ತೆರೆದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಅವರು ಈ ಕುರಿತು ತಿಳಿಸಿದ್ದಾರೆ. ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಾರ್ಡ್‍ವಾರು ನೋಂದಣಿ ಮಾಡಿಕೊಳ್ಳಲು ಸ್ಥಳ ಗುರುತಿಸಿ, ಸಂಪರ್ಕಿಸಬಹುದಾದ ವ್ಯಕ್ತಿಗಳ ವಿವರಗಳನ್ನು ನೀಡಲಾಗಿದೆ.
ಈ ಯೋಜನೆ ಅನ್ವಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಗಳನ್ನು ನೀಡಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, 'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ, ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರಲಿದೆ' ಎಂದು ಹೇಳಿದ್ದಾರೆ. ಹಣ ಪಡೆದ ಪ್ರಕರಣದಲ್ಲಿ ನೋಂದಣಿ ಕೇಂದ್ರದ ಲಾಗಿನ್ ಐಡಿ ರದ್ದುಗೊಳಿಸಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ ಈಗ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಫಲಾನುಭವಿಗಳಿಗೆ SMS ಕಳುಹಿಸುವುದಿಲ್ಲ. ಫಲಾನುಭವಿಗಳು ತಮಗೆ ಹತ್ತಿರದ ಗ್ರಾಮ ಒನ್, ಗ್ರಾಮ ಪಂಚಾಯತಿ ಕಚೇರಿಯ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ನಗರದ ವಾರ್ಡ್ ಕಚೇರಿಗಳಲ್ಲಿ ನೇರವಾಗಿ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು.
ಹಣ ವಸೂಲಿ ಪ್ರಕರಣ ದಾಖಲು; ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಉಚಿತವಾಗಿದೆ. ಆದರೆ ಕೆಲವು ಕಡೆ ಹಣ ಪಡೆಯುವ ಪ್ರಕರಣಗಳು ಸಹ ಬೆಳಕಿಗೆ ಬಂದಿದೆ. ಫಲಾನುಭವಿಗಳಿಂದ ಹಣ ವಸೂಲಿ ಮಾಡಿರುವುದಕ್ಕೆ, ಗ್ರಾಮ ಒನ್ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ವಿರುದ್ಧ ಬಳ್ಳಾರಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂಡೂರು ತಾಲೂಕಿನ ಅಂಕಮನಾಳು ಗ್ರಾಮದ ಗ್ರಾಮ ಒನ್ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ದೇವರಾಜ್ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪ್ರತಿ ಅರ್ಜಿದಾರರಿಂದ ರೂ. 50 ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸಂಡೂರು ತಾಲೂಕಿನ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಂಕಮನಾಳು ಗ್ರಾಮದ ಮಾರೆಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು, ಉದ್ದೇಶ ಪೂರ್ವಕವಾಗಿ ಗೃಹಲಕ್ಷ್ಮಿ ಫಲಾನುಭವಿಗಳಿಂದ ಪ್ರತಿ ಅರ್ಜಿಗೆ ರೂ. 50 ಹಣ ಸ್ವೀಕರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಆಗಸ್ಟ್ 1ರಂದು ಅಧಿಕಾರಿಗಳ ತಂಡವು ದಾಳಿ ನಡೆಸಿತ್ತು.
ಸಂಡೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳನಾಗಪ್ಪ, ಅಂಕಮನಾಳು ಗ್ರಾಮದ ಗ್ರಾಮ ಆಡಳಿತಾಧಿಕಾರಿ ಬಿ. ಕೊಟ್ರಪ್ಪ, ಚೋರನೂರು ಪಟ್ಟಣದ ಕಂದಾಯ ನಿರೀಕ್ಷಕ ಬಿ.ವೀರೇಂದ್ರ ಕುಮಾರ ಅವರು ದಾಳಿ ನಡೆಸಿ ಅಕ್ರಮವನ್ನು ಪತ್ತೆ ಹಚ್ಚಿದ್ದರು.
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಂದ ಯಾವುದೇ ಶುಲ್ಕ ಪಡೆಯಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ ಫಲಾನುಭವಿಗಳಿಂದ ಪ್ರತಿ ಅರ್ಜಿಗೆ ರೂ. 50 ಹಣ ಸ್ವೀಕರಿಸಿ ಸರ್ಕಾರಕ್ಕೆ ನಂಬಿಕೆ ದ್ರೋಹಮಾಡಿ ಮೋಸ ಮಾಡಿರುವ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.












Click it and Unblock the Notifications