ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿಯವರ ಅತ್ತೆ ವಿರುದ್ಧ ವಂಚನೆ ಪ್ರಕರಣ ದಾಖಲು
ಬಳ್ಳಾರಿ, ಆಗಸ್ಟ್, 20: ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ಅತ್ತೆ ದೇರೆಡ್ಡಿ ನಾಗಲಕ್ಷ್ಮಮ್ಮ ಮತ್ತು ಬಿ.ಕೆ.ನಾಗರಾಜ್ ಅವರ ವಿರುದ್ಧ ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಮಾಜಿ ಶಾಸಕ ಎಂ.ದಿವಾಕರ ಬಾಬು ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಎಂ.ಹನುಮ ಕಿಶೋರ್ ಅವರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಎಂ.ಹನುಮ ಕಿಶೋರ್ ಅವರು ತಮ್ಮ ಆಸ್ತಿಯೊಂದನ್ನು ದೇರೆಡ್ಡಿ ನಾಗಲಕ್ಷ್ಮಮ್ಮ ಅವರಿಗೆ ಖಂಡಿತ ಕ್ರಯ ಪತ್ರದ ಮೂಲಕ ನೋಂದಣಿ ಮಾಡಿ, ಮಾರಾಟ ಮಾಡಿದ್ದರು. ಒಪ್ಪಂದದ ಉಲ್ಲಂಘನೆ, ಕ್ರಯ ಪತ್ರ ರದ್ಧತಿ ಹಾಗೂ ಒಪ್ಪಂದದ ಪ್ರಕಾರ ಆಸ್ತಿ ಖರೀದಿಗಾಗಿ ನೀಡಲಾಗಿದ್ದ ಚೆಕ್ ಕಲೆಕ್ಷನ್‌ಗಾಗಿ ಬ್ಯಾಂಕ್‌ಗೆ ಜಮಾ ಮಾಡಿದ್ದರು. ಆದರೆ ಖಾತೆ ಹಣ ಇಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹನುಮ ಕಿಶೋರ್ ಅವರು ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ.

ಎಂ.ಹನುಮ ಕಿಶೋರ್ ಅವರು ತಮ್ಮ ಮಾಲಿಕತ್ವದ ಬಳ್ಳಾರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಇರುವ, ನಲ್ಲಚೆರುವು ಪ್ರದೇಶದ ಟಿಎಸ್ ನಂ.4/1ಬಿ, 4/2/ಬಿ, 4/ಸಿಎ/2, 4/3ಬಿ 2ಗಳ ಒಟ್ಟು 1 ಹೆಕ್ಟೇರ್ (43920 ಚದರ ಅಡಿಗಳ) ಜಾಗವನ್ನು ಒಟ್ಟು 35 ಕೋಟಿ ರೂಪಾಯಿಗಳಿಗೆ ಷೆಗೀರಾ ಟಾಕ ಪ್ರೈ.ಲಿ. ಕಂಪನಿಯ ನಿರ್ದೇಶಕರಾದ ದೇರೆಡ್ಡಿ ನಾಗಲಕ್ಷ್ಮಮ್ಮ ಹಾಗೂ ಬಿ.ಕೆ.ನಾಗರಾಜ ಅವರ ಹೆಸರಿಗೆ 04.05.2023ರಂದು ಖಂಡಿತ ಕ್ರಯ ಪತ್ರ ಮಾಡಿಕೊಳ್ಳಲು ಮಾತುಕತೆ ಮಾಡಿದ್ದರು. ನಂತರ 20 ಕೋಟಿ ರೂಪಾಯಿಗಳ ಚೆಕ್ ಅನ್ನು ಮುಂಗಡ ರೂಪದಲ್ಲಿ ನೀಡಲಾಗಿತ್ತು.
01.08.2023ಕ್ಕೆ ಚೆಕ್ ಅನ್ನು ನಗದಾಗಿಸಿಕೊಳ್ಳುವಂತೆ ಹನುಮ ಕಿಶೋರ್ ಅವರಿಗೆ ಖರೀದಿದಾರರಾದ ನಾಗಲಕ್ಷ್ಮಮ್ಮ ಹಾಗೂ ಬಿ.ಕೆ.ನಾಗರಾಜ್ ಅವರು ಮನವಿ ಮಾಡಿದ್ದರು. ಆದರೆ ಇದಾದ ನಂತರ 27.07.2023 ರಂದು ಹನುಮ ಕಿಶೋರ್ ಅವರಿಗೆ ವಕೀಲರ ಮೂಲಕ ನೊಟೀಸ್ ನೀಡಿದ ನಾಗಲಕ್ಷ್ಮಮ್ಮ ಹಾಗೂ ಬಿ.ಕೆ.ನಾಗರಾಜ್ ಅವರು ಸದರಿ ಆಸ್ತಿಯನ್ನು ಖರೀದಿಸಲಾಗದು, ಒಪ್ಪಂದದಂತೆ ಹಣ ನೀಡಲಾಗದು, ಈಗಾಗಲೇ ಮಾಡಿಕೊಂಡಿರುವ ಕ್ರಯ ಪತ್ರವನ್ನು ರದ್ದುಗೊಳಿಸುವಂತೆ ತಿಳಿಸಿದ್ದಾರೆ.
02.08.2023 ರಂದು ಹನುಮ ಕಿಶೋರ್ ಅವರು 20 ಕೋಟಿ ರೂಪಾಯಿಗಳ ಚೆಕ್ ಅನ್ನು ನಗದಾಗಿಸಿಕೊಳ್ಳಲು ಬ್ಯಾಂಕ್‌ಗೆ ಜಮಾ ಮಾಡಿದಾಗ ಖರೀದಿದಾರರು ಚೆಕ್ ನೀಡಿದ ಖಾತೆಯಲ್ಲಿ ಹಣ ಇಲ್ಲ ಎಂಬ ಮಾಹಿತಿ ಬಹಿರಂಗ ಆಗಿದೆ. ಈ ಹಿನ್ನೆಲೆ ಹನುಮ ಕಿಶೋರ್ ಅವರು ವಂಚನೆ (ಕಲಂ:420) ಪ್ರಕರಣವನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆ ಬ್ರೂಸ್ ಪೇಟೆ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications