ರಾಜಕೀಯದಲ್ಲಿ ಇನ್ನೂ ಕಣ್ಣು ಬಿಡದ ಪ್ರಿಯಾಂಕ್ ಖರ್ಗೆ ನಾನು ಸಿಎಂ ಅಂತಾರೆ- ಈಶ್ವರಪ್ಪ ವ್ಯಂಗ್ಯ
ಬಳ್ಳಾರಿ, ನವೆಂಬರ್ 06: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ನಾನೇ ಸಿಎಂ ವಿವಾದ ತೀವ್ರ ಕೋಲಾಹಲ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಹೇಳಿಕೆ, ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಬಲಿಗರ ನಿದ್ದೆಗೆಡಿಸಿದೆ. ಇನ್ನು ಒಂದೂವರೆ ವರ್ಷದ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಆಗಲೇಬೇಕು ಎಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.
ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕೆ ಮಾಡುವ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲೇ ನಾಯಕತ್ವ ಅಥವಾ ಮುಖ್ಯಮಂತ್ರಿ ಬದಲಾವಣೆ ಚರ್ಚೆಯಿಂದ ಲೇವಡಿಗೊಳಗಾಗಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಈ ವಿಚಾರದಿಂದ ವಿಪಕ್ಷಗಳ ಕೈಗೆ ಹೊಸ ಅಸ್ತ್ರ ನೀಡಿದಂತಾಗಿದೆ.

ಕಾಂಗ್ರೆಸ್‌ನ ನಾನೇ ಸಿಎಂ ವಿವಾದದ ಬಗ್ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಯಿಸಿದ್ದು, ರಾಜಕೀಯದಲ್ಲಿ ಇನ್ನೂ ಕಣ್ಣು ಬಿಡದ ಪ್ರಿಯಾಂಕ್ ಖರ್ಗೆ ನಾನು ಸಿಎಂ ಅಂತಾರೆ ಎಂದು ಕಾಂಗ್ರೆಸ್ ನಾಯಕ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲರೂ ಮುಖ್ಯಮಂತ್ರಿಯಾಗುವವರೇ..?. ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಎಂದು 224 ಜನರು ಹೇಳುತ್ತಿದ್ದಾರೆ. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಟ್ಟಿಲ್ಲ, ಪ್ರಿಯಾಂಕ್ ಖರ್ಗೆ ನಾನು ಸಿಎಂ ಎನ್ನುತ್ತಾರೆ. ಅವರಪ್ಪನ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನಾನೇ ಸಿಎಂ ಅಂತಾನೆ ಮಗ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಆಗಲು ಬಿಟ್ಟಿಲ್ಲ. ಇನ್ನು ಇವರನ್ನು ಬಿಡುತ್ತಾರಾ. ಸತೀಶ್ ಜಾರಕಿಹೊಳಿ ಅವರು ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎನ್ನುತ್ತಾರೆ. ಇನ್ನೂ ಜಿ. ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳುತ್ತಿದ್ದಾರೆ. ಪರಮೇಶ್ವರ ದೇವರು ಅನುಗ್ರಹ ಇದ್ದರೆ ಸಿಎಂ ಆಗುತ್ತೇನೆ ಎನ್ನುತ್ತಾರೆ. ದೇವರನ್ನು ಬೈಯುವ ಕಾಂಗ್ರೆಸ್‌ನವರು ಇದೀಗ ದೇವರು ಎನ್ನುತ್ತಾರೆ ಎಂದರು.
ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಮುಖ್ಯಮಂತ್ರಿ ಮಾಡಲಿ. ಪರಮೇಶ್ವರ ಮತ್ತು ಖರ್ಗೆಗಾಗಿ ಅದೊಂದು ಜಾತಿಗೆ ಎರಡು ಸಿಎಂ ಕೊಡಲಿ ನಮ್ಮ ಅಭ್ಯಂತರವಿಲ್ಲ. ಮಾನ ಮರ್ಯಾದೆ ಇಲ್ಲ ಮುಖ್ಯಮಂತ್ರಿ ಬಗ್ಗೆ ಮಾತನಾಡಲ್ಲ ಎಂದ ಸಿದ್ದರಾಮಯ್ಯ ಇಂದು ನಾನೇ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ನಂತರ ಉಲ್ಟಾ ಹೊಡೆಯುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications