ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಮದ್ಯ ಸೇವಿಸಿ ವಿದೇಶಿಗರ ಮೋಜು ಮಸ್ತಿ, ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ
ಹಲವಾರು ಬಾರಿ ವಿದೇಶಿ ಪ್ರವಾಸಿಗರು ಹಂಪಿಯ ಗುಡ್ಡಗಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮಷ್ಟಕ್ಕೆ ತಿರುಗುತ್ತಾರೆ.
ವಿಜಯನಗರ, ಫೆಬ್ರವರಿ. 22: ವಿಶ್ವದ ಪಾರಂಪರಿಕ ನಗರಗಳ ಪಟ್ಟಿಯಲ್ಲಿರುವ ನಾಡಿನ ಪ್ರಸಿದ್ಧ ಸ್ಥಳ ಹಂಪಿಯಲ್ಲಿ ವಿದೇಶಿಗರ ಬೀಡು ಯಾವಾಗಲು ಇರುತ್ತದೆ. ಆದರೆ, ಕೆಲವು ಪ್ರವಾಸಿಗರು ಪೂಜನೀಯ ಸ್ಥಳದಲ್ಲಿ ಮಧ್ಯಪಾನ, ಧೂಮಪಾನ ಮಾಡಿವ ಮೂಲಕ ಪದೇ ಪದೇ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಮತ್ತೊಂದು ಘಟನೆ ವರದಿಯಾಗಿದೆ.
ತುಂಗಭದ್ರಾ ನದಿಯ ಅಂಚಿನಲ್ಲಿರುವ ಪುಣ್ಯಕ್ಷೇತ್ರದಲ್ಲಿ ಐವರು ಪ್ರವಾಸಿಗರ ತಂಡ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರುವುದು ವರದಿಯಾಗಿದೆ. ಹೀಗಾಗಿ ಹಂಪಿಯ ಪ್ರಸಿದ್ಧ ಪುರಂದರ ಮಂಟಪದಲ್ಲಿ ಪಾರ್ಟಿ ಮಾಡುತ್ತಿದ್ದ ವಿದೇಶಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ವಿದೇಶಿಗರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪಾರ್ಟಿ ಮಾಡುತ್ತಿದ್ದ ವಿದೇಶಿಯರ ಗುಂಪನ್ನು ನೋಡಿದ ಕೆಲವು ಸ್ಥಳೀಯರು ಪವಿತ್ರ ಸ್ಥಳದ ಬಳಿ ಪಾರ್ಟಿ ಮಾಡದಂತೆ ಕೇಳಿಕೊಂಡಿದ್ದಾರೆ. ಮಾತು ಕೇಳದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ಬಂದ ನಂತರ, ಪ್ರವಾಸಿಗರು ತಮ್ಮೊಂದಿಗೆ ಇಟ್ಟುಕೊಂಡಿದ್ದ ಮದ್ಯ ಮತ್ತು ಇತರ ವಸ್ತುಗಳನ್ನು ಬಿಚ್ಚಿಟ್ಟಿದ್ದಾರೆ.
ಪುರಂದರ ಮಂಟಪದ ಅಂಚಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ವಿದೇಶಿಗರ ಗುಂಪನ್ನು ನೋಡಿದ ಹಂಪಿಯ ಸ್ಥಳೀಯರೊಬ್ಬರು "ನಾವು ಅವರ ವಿಡಿಯೋ ಮಾಡಲು ಆರಂಭಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಗಮನಿಸಿ ವಾದಿಸಲು ಶುರು ಮಾಡಿದರು. ಈ ಸ್ಥಳದಲ್ಲಿ ಪಾರ್ಟಿ ಮಾಡಬಾರದು ಎಂಬ ಯಾವುದೇ ಸೂಚನೆಗಳಿಲ್ಲ ಎಂದು ಪ್ರವಾಸಿಗರೊಬ್ಬರು ವಾದಿಸಿದರು. ನಾವು ಪ್ರವಾಸಿಗರಿಗೆ ಇಲ್ಲಿನ ನಿಯಮಗಳನ್ನು ವಿವರಿಸಿ, ಬಳಿಕ ಪೊಲೀಸರಿಗೆ ಕರೆ ಮಾಡಿದ್ದೇವೆ" ಎಂದಿದ್ದಾರೆ.
ಹಂಪಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಬರುತ್ತಾರೆ. ಹಂಪಿಯ ಪ್ರಸಿದ್ಧ ಸ್ಮಾರಕಗಳಿಗೆ ಭೇಟಿ ನೀಡುವುದರ ಜೊತೆಗೆ, ಇಲ್ಲಿ ಒದಗಿಸಲಾದ ರಾಕ್ ಕ್ಲೈಂಬಿಂಗ್ ಮತ್ತು ಜಲಕ್ರೀಡೆ ಚಟುವಟಿಕೆಗಳಿಂದಾಗಿ ಹೆಚ್ಚಿನ ವಿದೇಶಿಗರು ಹಂಪಿಯತ್ತ ಆಕರ್ಷಿತರಾಗುತ್ತಾರೆ. ಹಂಪಿ ಬಳಿಯ ತುಂಗಭದ್ರಾ ನದಿ ಹಾಗೂ ಕೊಪ್ಪಳದ ಆನೆಗುಂದಿಯಲ್ಲಿ ವಿದೇಶಿಗರು ಹೆಚ್ಚು ಸಮಯ ಕಳೆಯುತ್ತಾರೆ.

"ಹಲವಾರು ಬಾರಿ ವಿದೇಶಿ ಪ್ರವಾಸಿಗರು ಹಂಪಿಯ ಗುಡ್ಡಗಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮಷ್ಟಕ್ಕೆ ತಿರುಗುತ್ತಾರೆ. ಅವರು ಸಾಮಾನ್ಯವಾಗಿ ಮಾಹಿತಿ ಕೇಂದ್ರಕ್ಕೆ ಅಥವಾ ಬಾಡಿಗೆ ಸೈಕಲ್‌ಗಳಿಗಾಗಿ ನಮ್ಮ ಬಳಿಗೆ ಬಂದಾಗ ಈ ಸ್ಥಳದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತೇವೆ. ಅವರು ಗುಂಪು ಪ್ರವಾಸಕ್ಕೆ ಬಂದಾಗ ಮಾರ್ಗದರ್ಶಿಗಳಿಗೆ ಸೂಚನೆಗಳನ್ನು ನೀಡಲಾಗುತ್ತದೆ" ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ವಿದೇಶಿ ಪ್ರವಾಸಿಗರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ, ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications