ವಿಜಯನಗರದ ವಿಮ್ಸ್ ರಕ್ತನಿಧಿಯಲ್ಲಿ ಅಗ್ನಿ ಅವಘಡ; ಸ್ಥಳಕ್ಕೆ ಶ್ರೀರಾಮುಲು ಭೇಟಿ
ಬಳ್ಳಾರಿ, ಜನವರಿ, 02: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ರಕ್ತನಿಧಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ರಕ್ತ ಬ್ಯಾಂಕ್ ಸುಟ್ಟು ಭಸ್ಮವಾಗಿದೆ.
ಸೆಪ್ಟೆಂಬರ್ 13ರಂದು ವಿಮ್ಸ್ ಐಸಿಯುನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರ್ನಾಲ್ಕು ರೋಗಿಗಳು ಮೃತಪಟ್ಟ ಘಟನೆ ಇನ್ನು ಜನರ ಮನಸ್ಸಿನಲ್ಲಿ ಹಸಿರಾಗಿದೆ. ಆದರೆ ಇದೀಗ ಮತ್ತೆ ರಕ್ತನಿಧಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮತ್ತು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ವಿಮ್ಸ್‌ನ ರಕ್ತ ಸಂಗ್ರಹ ಕೊಠಡಿಯಲ್ಲಿ ರಕ್ತ ಸಂಗ್ರಹಣೆಗಾಗಿ ಎಸಿ ಅಳವಡಿಸಲಾಗಿದೆ. ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂದು ಫ್ರಿಡ್ಜ್ ಸುಟ್ಟಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಗ್ರಹ ಮಾಡಲಾಗಿದ್ದ ಕೆಂಪು ರಕ್ತ ಹಾಗೂ ಬಿಳಿ ರಕ್ತ ಕಣಗಳ ಮಾದರಿಯ ರಕ್ತಗಳನ್ನು ಟ್ರಾಮಾಕೇರ್‌ಗೆ ಸ್ಥಳಾಂತರ ಮಾಡಲಾಗಿದೆ. ರೋಗಿಗಳಿಗೆ ರಕ್ತದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವಶ್ಯವಿದ್ದರೆ ಖಾಸಗಿ ಬ್ಲಡ್ ಬ್ಯಾಂಕ್‌ಗಳಿಂದ ರಕ್ತವನ್ನು ತರಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದೆ ಜೆ. ಶಾಂತಾ, ಏಮ್ಸ್ ಅಧೀಕ್ಷಕ ಡಾ. ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಅಗ್ನಿ ಅವಘಡ
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಡಿಸೆಂಬರ್ 26, 2022ರ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಮತ್ತು ಒಬ್ಬ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿತ್ತು. ಜವಾಹರಲಾಲ್ ನೆಹರೂ ಫಾರ್ಮಾ ಸಿಟಿಯಲ್ಲಿರುವ ಲಾರಸ್ ಲ್ಯಾಬ್ಸ್ ಲಿಮಿಟೆಡ್‌ನ ಯುನಿಟ್-3ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿತ್ತು. ಕಾರ್ಮಿಕರು ಘಟಕವನ್ನು ಸ್ವಚ್ಛಗೊಳಿಸುವ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಅಲ್ಲಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದರು. ಹಾಗೆಯೇ ಟೋಲ್ಯೂನ್ ದ್ರಾವಕ ಸೋರಿಕೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಕಾರ್ಖಾನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಟೋಲ್ಯೂನ್ ಸೋರಿಕೆಯನ್ನು ತಡೆಯಲು ಕಾರ್ಮಿಕರು ಪ್ರಯತ್ನಿಸಿದಾಗ ರಾಸಾಯನಿಕಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಫಾರ್ಮಸಿ ಆಡಳಿತ ಮಂಡಳಿ ಮಾಹಿತಿ ನೀಡಿದ್ದರು.












Click it and Unblock the Notifications