ಅನ್ಯಕೋಮಿನ ಯುವಕನೊಂದಿಗೆ ಪ್ರೀತಿ: ಮಗಳನ್ನೇ ಕೊಲೆಗೈದ ತಂದೆ
ಬಳ್ಳಾರಿ, ನವೆಂಬರ್ 9: ತಂದೆಯೇ ಮಗಳನ್ನು ಕೊಲೆ ಮಾಡಿರುವ ಪ್ರಕರಣ ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ಬಳಿ ನಡೆದಿದೆ. ಓಂಕಾರ ಗೌಡ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದ್ದು, ಪೊಲೀಸರ ವಿಚಾರಣೆ ವೇಳೆ ಆರೋಪಿ ತನ್ನ ಮಗಳನ್ನು ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕುಡುತಿನಿಯ ಬುಡ್ಗ ಜಂಗಮ ಕಾಲೋನಿ ನಿವಾಸಿ ಆರೋಪಿ ಓಂಕಾರ ಗೌಡನ ಪುತ್ರಿ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಮನೆಯವರಿಗೆ ಗೊತ್ತಾಗಿದ್ದು, ಆತನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಪೋಷಕರ ವಿರೋಧದ ನಡುವೆಯೂ ಯುವತಿ ಅನ್ಯಕೋಮಿನ ಯುವಕನ ಜೊತೆ ಒಡನಾಟ ಮುಂದುವರೆಸಿದ್ದಳು ಎನ್ನಲಾಗಿದೆ.
ಹೀಗಾಗಿ ಮಗಳ ಮೇಲೆ ಕೋಪ ಹಾಗೂ ಬೇಸರಗೊಂಡ ತಂದೆ ಅಕ್ಟೋಬರ್ 31ರಂದು ಬಳ್ಳಾರಿಯ ಎಚ್‌ಎಲ್‌ಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 31ರಂದು ಓಂಕಾರ ಗೌಡ ಸಿನಿಮಾ ಸಿನಿಮಾ ತೋರಿಸುವುದಾಗಿ ಮಗಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಹೀಗಾಗಿ ಅಲ್ಲಿಂದ ಸಮೀಪದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಮಗಳಿಗೆ ಇಷ್ಟದ ತಿಂಡಿ ಕೊಡಿಸಿದ್ದಾನೆ. ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿ, ಆಭರಣದ ಅಂಗಡಿಯಲ್ಲಿ ಒಂದು ಜೊತೆ ಓಲೆ ಹಾಗೂ ಉಂಗುರವನ್ನು ಮಗಳಿಗೆ ಕೊಡಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ತಂದೆ ಹಾಗೂ ಮಗಳು ಊರಿಗೆ ಹಿಂತಿರುಗುವ ವೇಳೆ ರಾತ್ರಿಯಾಗಿತ್ತು. ಪ್ರೀತಿ ವಿಚಾರದಿಂದ ಮಗಳ ಬಗ್ಗೆ ಅಸಮಾಧಾನಗೊಂಡಿದ್ದ ಆರೋಪಿ ಎಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳ ಕರೆತಂದು, ಸ್ವಲ್ಪ ಹೊತ್ತು ಇಲ್ಲೇ ನಿಂತಿರು ಕೆಲಸವಿದೆ ಮುಗಿಸಿ ಬರುತ್ತೇನೆ ಎಂದು ಹೇಳಿ ಕಣ್ಮರೆಯಾಗಿದ್ದಾನೆ. ಸ್ಪಲ್ಪ ಸಮಯದ ನಂತರ ಬಂದ ಆರೋಪಿ ಮಗಳನ್ನು ಕಾಲುವೆಗೆ ತಳ್ಳಿದ್ದಾನೆ ಎನ್ನಲಾಗಿದೆ. ಅಲ್ಲದೇ ಅಲ್ಲಿಂದ ತನ್ನ ಬೈಕ್ ಅನ್ನು ಗೆಳೆಯ ಭೀಮಪ್ಪನ ಮನೆಯಲ್ಲಿ ಬಿಟ್ಟು, ತಿರುಪತಿಗೆ ತೆರಳಿದ್ದಾನೆ. ತಿರುಪತಿ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಗೆಳೆಯ ಭೀಮಪ್ಪ ಯುವತಿ ಕೊಲೆಗೆ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ. ಆರೋಪಿಯು ಮಗಳ ಹೆಸರಿನಲ್ಲಿ ₹20 ಲಕ್ಷ ಬ್ಯಾಂಕ್‌ನಲ್ಲಿ ಇರಿಸಿದ್ದು, ಕೊಲೆ ಮಾಡುವ ಮೊದಲು ಅದನ್ನು ಗೆಳೆಯನ ಸಹಾಯದಿಂದ ವರ್ಗಾವಣೆ ಮಾಡಿಕೊಂಡಿದ್ದ ಎಂಬ ಸಂಗತಿಯೂ ವಿಚಾರಣೆಯಲ್ಲಿ ಬಹಿರಂಗವಾಗಿದೆ.
ನವೆಂಬರ್ 1ರಂದು ಆರೋಪಿ ಓಂಕಾರ ಗೌಡ ಪತ್ನಿ ಗಂಡ ಹಾಗೂ ಪುತ್ರಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಈ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ. ತೋರಣಗಲ್ ಡಿವೈಎಸ್ಪಿ ಎಸ್.ಎಸ್. ಕಾಶಿಗೌಡ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಸುರೇಶ್ ತಳವಾರ್ ಮತ್ತು ತಾರಾಬಾಯಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.












Click it and Unblock the Notifications