ಬಳ್ಳಾರಿ: ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವನೆ, 30ಕ್ಕೂ ವಿದ್ಯಾರ್ಥಿನಿಯರು ಅಸ್ವಸ್ಥ
ವಿಜಯನಗರ, ಆಗಸ್ಟ್, 10: ಕಲುಷಿತ ಆಹಾರ ಸೇವನೆಯಿಂದ 30ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಹೊಸಪೇಟೆ ನಗರದಲ್ಲಿ ಸಂಭವಿಸಿದೆ.
ನಗರದ ಸರ್ಕಾರಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿರುವ 148 ವಿದ್ಯಾರ್ಥಿಗಳ ಪೈಕಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಅವರನ್ನು ನಗರದ ಉಪ ವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಹಾಸ್ಟೆಲ್ನಲ್ಲೇ ಮಾತ್ರೆ, ಇಂಜಕ್ಷನ್ ನೀಡಿ ಉಪಚರಿಸಲಾಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಫುಡ್ ಪಾಯಿಸನ್‌ನಿಂದ ಈ ರೀತಿಯ ತೊಂದರೆ ಆಗಿರಬೇಕು ಎಂದು ಶಂಕಿಸಾಗಿದೆ. ಮತ್ತೊಂದೆಡೆ ಹಾಸ್ಟೆಲ್‌ನಲ್ಲಿ ನೀರು ಶುದ್ದೀಕರಣದ ಘಟಕ ಕೆಟ್ಟುಹೋಗಿದೆ ಎಂದು ಹೇಳಲಾಗಿದೆ. ಹಾಸ್ಟೆಲ್‌ನಲ್ಲಿನ 17 ಮಂದಿ ವಿದ್ಯಾರ್ಥಿನಿಯರು ಕೇವಲ ಸಸ್ಯಾಹಾರ ಊಟ ಮಾಡಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಜಮೀರ್ ಅಹ್ಮದ್ ಭೇಟಿ
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಡಿಎಚ್‌ಒ ಡಾ.ಸಲೀಂ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದ್ದಾರೆ.
ಇನ್ನು ಒಂದು ಅಂಬುಲೆನ್ಸ್ ಅನ್ನು ಹಾಸ್ಟೆಲ್ ಆವರಣದಲ್ಲಿ ಇರಿಸಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಈ ಘಟನೆಯ ಬಗ್ಗೆ ಉಪವಿಭಾಗಾಧಿಕಾರಿ ಅವರಿಂದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ಚಿಕನ್ ಊಟ ಸೇವಿಸಿ 28 ವಿದ್ಯಾರ್ಥಿಗಳು ಅಸ್ವಸ್ಥ
ಇತ್ತೀಚೆಗಷ್ಟೇ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕನ್ ಊಟ ಸೇವಿಸಿ 28 ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಕುಮಾರಸ್ವಾಮಿ ಅವರನ್ನು ಅಮಾನತು ಮಾಡಲಾಗಿತ್ತು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು ಅವರು ಕುಮಾರಸ್ವಾಮಿ ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಇನ್ನು ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಇವರ ಸ್ಥಾನಕ್ಕೆ ಪ್ರಭಾರ ಪ್ರಾಂಶುಪಾಲರಾಗಿ ಅದೇ ಶಾಲೆಯ ಕಂಪ್ಯೂಟರ್ ಶಿಕ್ಷಕ ಎಂ.ಕುಮಾರಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.
ಈ ಬಗ್ಗೆ ಮಾತನಾಡಿದ ನವೀನ್ ಕುಮಾರ್ ರಾಜು, ಆದೇಶದಲ್ಲಿ ಅಮಾನತುಗೊಂಡ ಪ್ರಾಂಶುಪಾಲರೇ ಪ್ರಭಾರ ನಿಲಯಪಾಲಕರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಅಡುಗೆ ಸಿಬ್ಬಂದಿಯಲ್ಲಿ ಸಮನ್ವಯತೆ ಇಲ್ಲದಿರುವುದು, ವಸತಿ ಶಾಲೆಯಲ್ಲಿ ಶುಚಿತ್ವ ಇಲ್ಲದಿರುವುದು ಕಂಡುಬಂದಿದೆ ಎಂದು ಹೇಳಿದ್ದರು.
ಅಪ್ಪನದೊಡ್ಡಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ಹಲ್ಲಿ ಪತ್ತೆ, ವಿದ್ಯಾರ್ಥಿಗಳು ಅಸ್ವಸ್ಥ ಘಟನೆ ಹಿನ್ನೆಲೆ ಚಿಕನ್ ಊಟ ಸೇವಿಸಿದ್ದ ಮಕ್ಕಳಿಗೆ ವಾಂತಿ-ಬೇಧಿಯಾಗಿ ಅಸ್ವಸ್ಥಗೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಭಾನುವಾರ ನಡೆದಿತ್ತು. ಈ ವೇಳೆ ಒಟ್ಟು 30 ವಿದ್ಯಾರ್ಥಿಗಳಿಗೆ ವಾಂತಿ-ಬೇಧಿಯಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ 15 ಮಂದಿಗೆ ಬೇಗೂರು ಆಸ್ಪತ್ರೆಯಲ್ಲಿ ಡ್ರಿಪ್ ಹಾಕಿ ಚಿಕಿತ್ಸೆ ಕೊಡಿಸಲಾಗಿತ್ತು.
ಭಾನುವಾರ ರಾತ್ರಿ ಚಿಕನ್ ಊಟವನ್ನು ಮಾಡಲಾಗಿತ್ತು. ಅದನ್ನು ತಿಂದ ಬಳಿಕ ವಾಂತಿ-ಬೇಧಿ ಶುರುವಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಸದ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications