ಪ್ರಸಿದ್ಧ ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವಕ್ಕೆ ಈ ಬಾರಿಯೂ ಭಕ್ತರ ನಿರ್ಬಂಧ

ವಿಜಯನಗರ, ಜನವರಿ 21: ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಫೆ.8ರಿಂದ ಫೆ.19ರವರೆಗೆ ನಡೆಯಲಿದೆ. 11 ದಿನಗಳ ಕಾಲ ನಡೆಯಲಿರುವ ಈ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವಕ್ಕೆ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಾರ್ವಜನಿಕರು, ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅನಾರೋಗ್ಯದ ಹಿನ್ನೆಲೆ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ದೇವಸ್ಥಾನದ ರೂಢಿ, ಸಂಪ್ರದಾಯದ ಪೂಜಾ ಕಾರ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ರೀತಿಯ ಆಡಚಣೆ ಇಲ್ಲದಂತೆ ಸುಸೂತ್ರವಾಗಿ ಜರುಗಲಿವೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಸಭೆಯಲ್ಲಿ ತಿಳಿಸಿದರು.

Vijayanagara: Devotees Entry Restricted To Mylara Lingaleshwara Karnika This Year Also

ಫೆ.8ರಿಂದ ಫೆ.19ರವರೆಗೆ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.8ರಂದು ಕಂಕಣಧಾರಣೆ, ಫೆ.16ರಂದು ಹುಣ್ಣಿಮೆ, ಫೆ.18ರಂದು ಕಾರ್ಣಿಕೋತ್ಸವ ಮತ್ತು ಫೆ.19ರಂದು ಸರಪಳಿ ಪವಾಡ ಜರುಗಲಿವೆ ಎಂದು ತಿಳಿಸಿದ ಡಿಸಿ ಅನಿರುದ್ಧ ಶ್ರವಣ್, ಸಾರ್ವಜನಿಕರು ಮತ್ತು ಭಕ್ತಾದಿಗಳು 11 ದಿನಗಳ ಕಾಲ ಕ್ಷೇತ್ರದತ್ತ ಬರದಂತೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮೈಲಾರ ಗ್ರಾಮಕ್ಕೆ ಸಾರ್ವಜನಿಕರು/ಭಕ್ತರ ಪ್ರವೇಶ ನಿರ್ಬಂಧ
ಕುರುವತ್ತಿ, ಹ್ಯಾರಡ, ಹೊಳಲು, ಹಾವೇರಿ, ಹೊಳಕಡೆ, ಡೆಂಕನಮರಡಿಯ ಎಲ್ಲ ದಾರಿಗಳಿಗೆ ಸೂಕ್ತ ಬ್ಯಾರಿಕೆಡ್ ವ್ಯವಸ್ಥೆ ಮಾಡಿಕೊಂಡು ಮೈಲಾರ ಗ್ರಾಮಕ್ಕೆ ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಸೂಚಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಫೆ.8ರಿಂದ ಫೆ.19ರವರೆಗೆ ಮೈಲಾರಕ್ಕೆ ಬರುವುದರಿಂದ ಹೊರಡಗೆಯಿಂದ ಬಂದಂತ ಭಕ್ತಾದಿಗಳು ಗ್ರಾಮಕ್ಕೆ ಪ್ರವೇಶ ಮಾಡದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ತಿಳಿಸಿದ ಅವರು, ದರ್ಶನಕ್ಕೂ ಸಹ ನಿರ್ಬಂಧ ವಿಧಿಸಲಾಗುತ್ತಿದ್ದು, ಈ ಕುರಿತು ಪ್ರತ್ಯೇಕ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗುವುದು ಎಂದರು.

Vijayanagara: Devotees Entry Restricted To Mylara Lingaleshwara Karnika This Year Also

ಜಾತ್ರಾ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಡಿಸಿ ಅನಿರುದ್ಧ ಶ್ರವಣ್, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಗತ್ಯ ಇರುವ ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಡೆಂಕನಮರಡಿ, ಕಾರ್ಣಿಕ ಮೈದಾನ, ಮೈಲಾರ ಗ್ರಾಮ ಸುತ್ತಲು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಂದೋಬಸ್ತ್ ಕೈಗೊಳ್ಳಬೇಕು. ಡೆಂಕನಮರಡಿ ಪ್ರದೇಶ, ಕಾಗಿನೆಲೆ ಮುಖ್ಯರಸ್ತೆಗೆ, ಮೈಲಾರ ದೇವಸ್ಥಾನದ ದ್ವಾರಬಾಗಿಲು ಹತ್ತಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಅವರು ತಿಳಿಸಿದರು.

ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದ ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯಕ್, ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಆರೋಗ್ಯ ಸೇವೆ, ಸ್ವಚ್ಛತೆ ಮತ್ತು ನೈರ್ಮಲ್ಯೀಕರಣಕ್ಕೆ ವಿಶೇಷ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತುರ್ತು ಚಿಕಿತ್ಸೆಗಾಗಿ ಎರಡು ತಾತ್ಕಾಲಿಕ ಆಸ್ಪತ್ರೆಗಳನ್ನು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಿಟ್ಟುಕೊಳ್ಳಿ, ಬೇಕಾಗುವಷ್ಟು ವೈದ್ಯರು ಮತ್ತು ವೈದ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು ಮತ್ತು ಅಗತ್ಯವಿರುವ ಔಷಧಿಗಳು ಮತ್ತು ಆಂಬ್ಯುಲೆನ್ಸ್‍ಗಳನ್ನು ಸಜ್ಜಾಗಿಟ್ಟುಕೊಳ್ಳಿ ಎಂದರು.

Vijayanagara: Devotees Entry Restricted To Mylara Lingaleshwara Karnika This Year Also

ಮೈಲಾರ ಗ್ರಾಮದಲ್ಲಿ ಸ್ವಚ್ಚತೆಗಾಗಿ ಎಲ್ಲಾ ಅಗತ್ಯ ಕ್ರಮ ಜರುಗಿಸಲು ಸ್ಥಳೀಯ ಪಿಡಿಒ ಹಾಗೂ ತಾ.ಪಂ ಇಒ ಅವರಿಗೆ ಸೂಚನೆ ನೀಡಿದ ಶಾಸಕ ಪಿ.ಟಿ. ಪರಮೇಶ್ವರ ನಾಯಕ್, ಮೈಲಾರ ಗ್ರಾಮದಲ್ಲಿ ಶೇಖರಣೆಯಾಗಿರುವ ಎಲ್ಲಾ ತ್ಯಾಜ್ಯವನ್ನು ಸಾಗಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಬಸ್‌ಗಳು, ವಾಹನಗಳು ಬಿಡದಂತೆ ಕ್ರಮ
ಫೆ.8ರಿಂದ ಫೆ.20ರವರೆಗೆ ಮೈಲಾರಕ್ಕೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಹೊಸಪೇಟೆ, ಬಳ್ಳಾರಿ, ಗದಗ, ರಾಯಚೂರು ಕಡೆಯಿಂದ ಮೈಲಾರ ಜಾತ್ರಾ ಸಂಬಂಧ ಹೆಚ್ಚುವರಿ ಬಸ್‌ಗಳು ಹಾಗೂ ವಾಹನಗಳು ಬಿಡದಂತೆ ಅಗತ್ಯ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಖಡಕ್ ಸೂಚನೆ ನೀಡಿದರು ಮತ್ತು ಈ ಕುರಿತು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಪತ್ರ ಬರೆಯಲು ತಿಳಿಸಿದರು. ಖಾಸಗಿ ಬಸ್, ಟ್ಯಾಕ್ಸಿ, ಕ್ಯಾಬ್, ಟೆಂಪೊ ಇತ್ಯಾದಿಗಳು ಸಂಚರಿಸದಂತೆ ಅಗತ್ಯ ಕ್ರಮ ಜರುಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಪ್ರಚಾರಕ್ಕೆ ಸೂಚನೆ
ಮೈಲಾರಲಿಂಗ ಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವದಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಿರುವ ವಿಷಯದ ಕುರಿತು ಹೆಚ್ಚಿನ ಪ್ರಚಾರವನ್ನು ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಮೂಲಕ ಮಾಡುವಂತೆ ಡಿಸಿ ಅನಿರುದ್ಧ ಶ್ರವಣ್ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ನಿರ್ಧಾರಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಆಗುವಂತೆ ನೋಡಿಕೊಳ್ಳಿ ಎಂದರು.

ಮೈಲಾರ ಗ್ರಾಮಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದಿನಿಂದಲೂ ಬಂದ ರೂಢಿ, ಸಂಪ್ರದಾಯದ ಪೂಜಾ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಸ್ಪಿ ಡಾ. ಅರುಣ ಎಸ್.ಕೆ, ಜಿ.ಪಂ ಸಿಇಒ ಹರ್ಷಲ್ ಬೊಯರ್ ಮಾತನಾಡಿ, ಅನೇಕ ಸಲಹೆ- ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಅಪರ ಜಿಲ್ಲಾಧಿಕಾರಿ ಮಹೇಶಬಾಬು, ಹರಪನಳ್ಳಿ ಸಹಾಯಕ ಆಯುಕ್ತರಾದ ಚಂದ್ರಶೇಖರಯ್ಯ, ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್, ಹೂವಿನಹಡಗಲಿ ತಹಸೀಲ್ದಾರ್ ಮಹೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+