ಬಳ್ಳಾರಿ ಉಪ ಚುನಾವಣೆ : ಅಭ್ಯರ್ಥಿ ಆಯ್ಕೆ ಜವಾಬ್ದಾರಿ ಡಿಕೆಶಿ ಹೆಗಲಿಗೆ
Recommended Video

ಬಳ್ಳಾರಿ, ಅಕ್ಟೋಬರ್ 10 : ಬಳ್ಳಾರಿ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು?. ಪಕ್ಷ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಹಲವಾರು ನಾಯಕರ ಹೆಸರು ಮುಂಚೂಣಿಯಲ್ಲಿದ್ದು, ಯಾರು ಅಭ್ಯರ್ಥಿಯಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ನಡೆಸಿದ ಸಭೆಗಳಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗೈರಾಗುತ್ತಿದ್ದು, ಅಭ್ಯರ್ಥಿ ಅಂತಿಮಗೊಂಡಿಲ್ಲ.
ಬಿ.ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರವಾದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ ಸ್ಪರ್ಧೆ ಮಾಡಲಿದ್ದಾರೆ.
ಅಭ್ಯರ್ಥಿ ಆಯ್ಕೆಗೆ ಡಿ.ಕೆ.ಶಿವಕುಮಾರ್ ಅವರು ತಮ್ಮ ನಿವಾಸದಲ್ಲಿ ಮಂಗಳವಾರ ಸಭೆ ನಡೆಸಿದರು. ಆದರೆ, ಕೆಲವು ಶಾಸಕರ ಗೈರು ಹಾಜರಿ ಕಾರಣ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ, ಅಭ್ಯರ್ಥಿ ಅಂತಿಮವಾಗಿಲ್ಲ...

ಶಾಸಕರು ಗೈರು
ಡಿ.ಕೆ.ಶಿವಕುಮಾರ್ ಅವರಿಗೆ ಬಳ್ಳಾರಿ ಚುನಾವಣೆ ಉಸ್ತುವಾರಿ ನೀಡಿರುವುದಕ್ಕೆ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಭ್ಯರ್ಥಿ ಆಯ್ಕೆಗೆ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ರಾತ್ರಿ ನಡೆಸಿದ ಸಭೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಂಡೂರು ಶಾಸಕ ಇ.ತುಕಾರಾಂ, ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಗೈರು ಹಾಜರಾಗಿದ್ದರು. ಇಂದು ನಡೆದ ಸಭೆಗೆ ಆನಂದ್ ಸಿಂಗ್ ಸಹ ಗೈರು ಹಾಜರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯಾರು?
ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಇ.ತುಕಾರಾಂ, ಭೀಮಾನಾಯಕ್, ಪಿ.ಟಿ.ಪರಮೇಶ್ವರ ನಾಯಕ್ ಅವರು ಅಭ್ಯರ್ಥಿ ಆಯ್ಕೆ ಬಗ್ಗೆ ನಿರಾಸಕ್ತಿ ವಹಿಸುತ್ತಿದ್ದಾರೆ. ಆದ್ದರಿಂದ, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

ಯಾರ ಹೆಸರು ಮುಂಚೂಣಿಯಲ್ಲಿ
ಬಳ್ಳಾರಿ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ಪ್ರಸಾದ್, ಕೂಡ್ಲಗಿಯ ನಾಗಮಣಿ, ಮಾಜಿ ಪರಿಷತ್ ಸದಸ್ಯ ಕೆ.ಎಸ್.ಎಲ್.ಸ್ವಾಮಿ ಪತ್ನಿ ಸರಸ್ವತಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ನಟಕಲ್ಲಪ್ಪ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಈ ಎಲ್ಲರೂ ಹೊಸ ಮುಖಗಳು.

ಮತ್ತೊಮ್ಮೆ ಸಭೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಮ್ಮೆ ಇಂದು ರಾತ್ರಿ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಅಭ್ಯರ್ಥಿ ಯಾರು? ಎಂಬುದರ ಮೇಲೆ ಹಣಾಹಣಿ ನಿರ್ಧಾರವಾಗಲಿದೆ.

ಬಿ.ಶ್ರೀರಾಮುಲು ಗೆಲುವು
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ಅವರು 534406 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನಿಂದ ಎನ್.ವೈ.ಹನುಮಂತಪ್ಪ ಅವರು ಸ್ಪರ್ಧಿಸಿ 449262 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನಿಂದ ಆರ್.ರವಿನಾಯಕ ಕಣಕ್ಕಿಳಿದಿದ್ದರು 12613 ಮತ ಪಡೆದಿದ್ದರು.












Click it and Unblock the Notifications