ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಟೆನ್ಶನ್ ಶುರು: ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್ ಕಿಡಿ
ಬಳ್ಳಾರಿ, ಸೆಪ್ಟೆಂಬರ್ 11: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಟೆನ್ಶನ್ ಶುರುವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಬಳ್ಳಾರಿಯಲ್ಲಿ ವಾಗ್ದಾಳಿ ನಡೆಸಿದರು.
ಬಳ್ಳಾರಿ ನಗರದ ಗುರು ಪಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯ ಬಹಿರಂಗ ಸಭೆಯ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಲಾಗಿತ್ತು. ರಾಹುಲ್ ಗಾಂಧಿ ಅವರಿಂದ ಸಾಗಿ ಬರುತ್ತಿರುವ "ಭಾರತ್ ಜೋಡೋ" ಯಾತ್ರೆಯ ಬಹಿರಂಗ ಸಭೆ ಮುಂದಿನ ತಿಂಗಳು ಬಳ್ಳಾರಿಯಲ್ಲಿ ನಡೆಯಲಿದ್ದು, ಅದು ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗುವಂತೆ ನಡೆಯಬೇಕು. ಇಡೀ ದೇಶ ಬಳ್ಳಾರಿ ಕಡೆಗೆ ತಿರುಗಿ ನೋಡುವಂತೆ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರದಿಂದ 25 ಸಾವಿರ ಜನರನ್ನು ಸೇರಿಸಬೇಕು. ಸಿದ್ದರಾಮಯ್ಯನವರ ಹುಟ್ಟುಹಬ್ಬ ಹಾಗೂ ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ನಡಿಗೆಗಿಂತ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ ಯಾವಾಗಲೋ ಪ್ರಧಾನಮಂತ್ರಿ ಆಗುತ್ತಿದ್ದರು. ಆಗ ಆರ್ಥಿಕ ತಜ್ಞರಿಗೆ ಪ್ರಧಾನಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದರು. ಅವರು ಅಧಿಕಾರದ ಹಿಂದೆ ಬಿದ್ದವರಲ್ಲ. ಅಧ್ಯಕ್ಷ ಸ್ಥಾನ ಬಿಟ್ಟು, "ಭಾರತ್ ಜೋಡೋ" ಮೂಲಕ ದೇಶದ ಜನರಲ್ಲಿ ಐಕ್ಯತೆ ಮೂಡಿಸಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಭ್ರಷ್ಟಾಚಾರದ ವಿರುದ್ಧ ಡಿಕೆಶಿ ಗುಡುಗು
ನಾವು ಅಧಿಕಾರಕ್ಕಾಗಿ, ರಾಜಕೀಯ ಉದ್ದೇಶದಿಂದ ಭಾರತ ಐಕ್ಯತಾ ಯಾತ್ರೆ ಮಾಡುತ್ತಿಲ್ಲ. ದೇಶದಲ್ಲಿ ಶಾಂತಿ ನೆಲೆಸಲು ಸರ್ವ ಜನಾಂಗದ ಶಾಂತಿ ತೋಟ ಆಗಬೇಕು. ತಮ್ಮ ಅಧಿಕಾರವನ್ನು ತ್ಯಾಗ ಮಾಡಿ ದೇಶಾದ್ಯಂತ ಯಾತ್ರೆಯನ್ನು ಆರಂಭಿಸಿದ್ದಾರೆ. ಎಡಿಜಿಪಿ ಸೇರಿದಂತೆ ರ‍್ಯಾಂಕ್ ಫಸ್ಟ್ ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ ಶಿಕ್ಷಣ ಇಲಾಖೆ, ಕೆಪಿಟಿಸಿಎಲ್ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಭ್ರಷ್ಟಾಚಾರ ಮೀತಿ ಮೀರಿದೆ. "ಭ್ರಷ್ಟಾಚಾರದ ಕುರಿತಾಗಿ ಬಿಜೆಪಿ ಶಾಸಕರ ಆಡಿಯೋಗಳು ಹೊರ ಬಂದದಿವೆ. ಆದರೂ ಮುಖ್ಯಮಂತ್ರಿಗಳು ಶಾಸಕರನ್ನು ಕರೆಸಿ ಮಾತನಾಡುತ್ತಿಲ್ಲ," ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾತ್ರೆಯ ಉದ್ದೇಶ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್
ಎಲ್ಲಾ ಸಮಾಜದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು, ಶಾಂತಿ ಮೂಡಿಸಲು, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು, ಜನರಲ್ಲಿ ಸಮಾನತೆ ಮೂಡಿಸಲು, ರಾಜ್ಯದಲ್ಲಿನ ಭ್ರಷ್ಟಾಚಾರ ಹೋಗಲಾಡಿಸಲು, ರೈತರ ಬದುಕನ್ನು ಸುಧಾರಣೆ, ಬೆಲೆ ಏರಿಕೆ ವಿರೋಧಿಸಿ, ಜನರಲ್ಲಿ ಜಾಗೃತಿ ಮೂಡಿಸಲು "ಭಾರತ್ ಜೋಡೋ" ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. "ಹೃದಯ, ಜಾತಿ, ಸಮಾಜವನ್ನು ಕಾಂಗ್ರೆಸ್ ಒಂದುಗೂಡಿಸುವ ಕೆಲಸ ಮಾಡುತ್ತಿದೆ." ಐಕ್ಯತೆ ಯಾತ್ರೆಯು ರಾಜಕೀಯ ಉದ್ದೇಶದ ಹೊರತಾಗಿದೆ.

ಅಕ್ಟೋಬರ್ 21ರಂದು ರಾಯಚೂರು ಜಿಲ್ಲೆಗೆ ಯಾತ್ರೆ
ಯಾತ್ರೆಯು ಗುಂಡ್ಲಪೇಟೆಯಿಂದ ರಾಜ್ಯಕ್ಕೆ ಕಾಲಿಟ್ಟಿದ್ದು, ಬಳ್ಳಾರಿಯಲ್ಲಿ ಅಕ್ಟೋಬರ್ 19ರಂದು ಸಾರ್ವಜನಿಕ ಸಮಾವೇಶ ಮಾಡಲಾಗುತ್ತದೆ. ಅಕ್ಟೋಬರ್ 21ರಂದು ರಾಯಚೂರು ಜಿಲ್ಲೆಗೆ ತೆರಳಿ ಅಲ್ಲಿಂದ ಆಂಧ್ರಪ್ರದೇಶ ಪ್ರವೇಶ ಮಾಡಲಿದೆ. "ಜನರ ಬಗ್ಗೆ ಕಾಳಜಿ ಇದ್ದವರು ಮೂರು ವರ್ಷದಿಂದ ಏನು ಮಾಡಲಿಲ್ಲ. ಈಗ ಕಾಳಜಿ ಹೆಸರಿನಲ್ಲಿ ಜನಸ್ಪಂದನೆ ಮಾಡಲು ಬಿಜೆಪಿ ಹೊರಟಿದೆ" ಎಂದರು. ಕಾಂಗ್ರೆಸ್ ಹಾಗೂ ನಾನು ಸೇರಿದಂತೆ ಎಲ್ಲರೂ ಜಿರೋ. ಆದರೆ ಸ್ಟಾಟಜಿಯ 23 ನಾಯಕರು ಯಾರೆಂದು ನನಗೆ ಗೊತ್ತಿಲ್ಲ ಎಂದರು.

ಸರ್ಕಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ
ನಂತರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. "ಇಡಿ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಫ್ ಬಿಜೆಪಿ ಆಗಿದೆ." ಬಿಜೆಪಿ ಶಾಸಕರು ಮತ್ತು ಸಚಿವರ ಮೇಲೆ ಆರೋಪಗಳಿದ್ದರೂ, ಅವರ ವಿರುದ್ಧ ಏಕೆ ತನಿಖೆ ಮಾಡುತ್ತಿಲ್ಲ? ಎಂದು ಪ್ರಶ್ನಿಸುವುದರ ಮೂಲಕ ಕಿಡಿಕಾರಿದರು. "ಬಿಜೆಪಿಯಲ್ಲಿ 2,500 ಕೋಟಿ ರೂಪಾಯಿಗಳನ್ನು ಕೊಟ್ಟರೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ನನ್ನ ಹೇಳಿಕೆ ಅಲ್ಲ, ಅದನ್ನು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ," ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಬು, ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ, ನಜೀರ್ ಅಹಮ್ಮದ್, ಕಾಂಗ್ರೆಸ್ ಮುಖಂಡರಾದ ಸಲೀಂ ಅಹಮ್ಮದ್, ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು, ಶಾಸಕರಾದ ಬಿ.ನಾಗೇಂದ್ರ, ಗಣೇಶ್, ತುಕಾರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications