Ballari Mayor Election 2023: ಇಂದು ಗಣಿನಾಡು ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ: ವಿವರ ಇಲ್ಲಿದೆ
ಬಳ್ಳಾರಿ, ಮಾರ್ಚ್, 29: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರುಗುತ್ತಲೇ ಇದೆ. ಅಲ್ಲದೇ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಕೂಡ ಭರ್ಜರಿ ಮತಬೇಟೆಯಲ್ಲಿದ್ದಾರೆ. ಮತ್ತೊಂದೆಡೆ ಹಲವೆಡೆ ಮೇಯರ್ ಚುನಾವಣೆಯ ಕಾವು ಕೂಡ ಏರತೊಡಗಿದೆ. ಅದೇ ರೀತಿಯಲ್ಲಿ ಗಣಿನಾಡು ಅಂತಲೇ ಪ್ರಸಿದ್ಧಿ ಪಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯ ಬಿಸಿ ತಾರಕಕ್ಕೆ ಏರಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಲ್ಲಿ ಕಾಂಗ್ರೆಸ್- 21 , ಬಿಜೆಪಿ - 13, ಪಕ್ಷೇತರರು 05 ಜನ ಸದಸ್ಯರು ಇದ್ದಾರೆ. ಹಿಂದಿನ ವರ್ಷ 2022ರ ಮಾರ್ಚ್ ತಿಂಗಳಿನಲ್ಲಿ ಮಹಾನಗರ ಪಾಲಿಕೆ ಎಲೆಕ್ಷನ್ ನಡೆದಿತ್ತು. ಆಗ ಮೇಯರ್ ಆಗಿ 34ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಎಂ.ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಆಗಿ 37ನೇ ವಾರ್ಡ್‌ನ ಮಾಲನ್ ಬೀ ಶನಿವಾರ ಆಯ್ಕೆ ಆಗಿದ್ದರು.

ಇದೀಗ ಮೇಯರ್, ಉಪಮೇಯರ್ ಅಧಿಕಾರವಧಿ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬುಧವಾರ (ಮಾರ್ಚ್ 29) ಚುನಾವಣೆ ನಡೆಯುತ್ತಿದೆ. ಹಾಗೆಯೇ ಮೇಯರ್ ಸ್ಥಾನಕ್ಕೆ ಎಸ್ಸಿ, ಉಪ ಮೇಯರ್ ಸ್ಥಾನಕ್ಕೆ ಎಸ್ಟಿ ಮೀಸಲು ಘೋಷಿಸಲಾಗಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ಐವರು ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಇದೀಗ 26 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಮೇಯರ್ ಪಟ್ಟ ಅಲಂಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ 6 ಜನ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಉಮಾದೇವಿ ಶಿವರಾಜ್, ತ್ರೀವೇಣಿ, ಕುಬೇರ, ಮಿಂಚು ಶ್ರೀನಿವಾಸ್ ಹಾಗೂ ಶ್ವೇತಾರಿಂದ ಮೇಯರ್ ಸ್ಥಾನದ ರೇಸ್ನಲ್ಲಿ ಇದ್ದಾರೆ. ಇನ್ನು ಉಪ ಮೇಯರ್ ಸ್ಥಾನಕ್ಕೆ 3 ಜನ ಪಾಲಿಕೆ ಸದಸ್ಯರ ಮಧ್ಯೆ ಪೈಪೋಟಿ ಏರ್ಪಟಿದೆ.
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಳ್ಳಾರಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಧ್ಯೆ ಪೈಪೋಟಿ ನಡೆದಿದೆ. ಎಲ್ಲಾ ಪಕ್ಷಗಳ ನಾಯಕರು ಚುನಾವಣೆ ಅಖಾಡಕ್ಕೆ ಇಳಿದಿದ್ದು, ಮತದಾರರನ್ನ ತಮ್ಮತ್ತ ಸೆಳೆಯಲಿಕ್ಕಾಗಿ ಇನ್ನಿಲ್ಲದ ಪ್ರಯತ್ನಗಳು ಮಾಡುತ್ತಿದ್ದಾರೆ. ಇದೇ ಹಿಂದಿನ ಮೇಯರ್ ಚುನಾವಣೆಯಲ್ಲಿ ಆಪರೇಷನ್ ಕಲಮದ ಭಯದಲ್ಲಿ ಕಾಂಗ್ರೆಸ್ ತನ್ನ ಸದಸ್ಯರನ್ನು ರೆಸಾರ್ಟ್ಗೆ ಕರೆದೊಯ್ದಿತ್ತು.












Click it and Unblock the Notifications