ಸಾರ್ವಜನಿಕರ ಮೇಲೆ ಹಲ್ಲೆ: ಬಳ್ಳಾರಿ ಕುಡತಿನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರುದ್ಧ ಜನಾಕ್ರೋಶ!
ಬಳ್ಳಾರಿ ನವೆಂಬರ್ 21: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುತ್ತಾರೆ. ಆದರೇ ಈ ಮಾತು ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತವಾದಂತಿದೆ. ಬಳ್ಳಾರಿ ತಾಲೂಕಿನ ಕುಡತಿನಿ ಪಟ್ಟಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಸಾರ್ವಜನಿಕನ ಮೇಲೆ ಹಲ್ಲೆ ನಡೆಸಿ ಈಗಲೂ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಹೊಂದಿರುವವರ ದರ್ಪವೇ ಮುಂದುವರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಕುಡತಿನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೀರ್ಥಪ್ರಸಾದ ಅವರು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ ಸಾರ್ವಜನಿಕನ ಮೇಲೆಯೇ ಹಲ್ಲೆ ಮಾಡಿ ದರ್ಪ ತೋರಿರುವ ಘಟನೆ ಮಂಗಳವಾರ ನಡೆದಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮುಖ್ಯಾಧಿಕಾರಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡತಿನಿ ಪಟ್ಟಣದ 19ನೇ ವಾರ್ಡಿಗೆ ಇಂದು ಬೆಳಗ್ಗೆ ಪಂಚಾಯಿತಿ ಮುಖ್ಯಾಧಿಕಾರಿ ತೀರ್ಥ ಪ್ರಸಾದ್‌ರವರು ಭೇಟಿ ನೀಡಿದ್ದಾಗ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಾಧಿಕಾರಿಗಳಿಗೆ ಸ್ಥಳೀಯ ನಿವಾಸಿ ಸಿ.ಮಂಜುನಾಥರವರು ಗಮನಕ್ಕೆ ತಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಮತ್ತು ಮಂಜುನಾಥರವರ ನಡುವೆ ಮಾತಿಗೆ ಮಾತು ಬೆಳೆದಾಗ ಆವೇಶಕ್ಕೆ ಒಳಗಾದ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಮಂಜುನಾಥ ರವರ ಮೇಲೆ ಹಲ್ಲೆ ನಡೆಸಿದ್ದಾರೆ.
ಕಳೆದ ತಿಂಗಳು ಸಹ ಇದೇ ರೀತಿ ಮುಖ್ಯಾಧಿಕಾರಿ ತೀರ್ಥ ಪ್ರಸಾದ್‌ರವರು ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದ ಘಟನೆಯನ್ನು ಜನರು ಮರೆಯುವ ಮುನ್ನವೇ ಮತ್ತೊಂದು ಅಂತಹದೇ ಹಲ್ಲೆ ಘಟನೆ ನಡೆದಿದೆ.
ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕಾದ ಅಧಿಕಾರಿಗಳೇ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು ವ್ಯವಸ್ಥೆಯಲ್ಲಿ ಅಧಿಕಾರಿಗಳ ದರ್ಪದ ಆರ್ಭಟ ಮೀತಿ ಮೀರಿರುವುದಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕರು ಈ ಘಟನೆಯನ್ನು ಖಂಡಿಸಿ, ಕೂಡಲೇ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ರವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications