ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಬಳ್ಳಾರಿ, ಏಪ್ರಿಲ್ 16: ಮಂಡ್ಯದಲ್ಲಿ 87ನೇ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ, ಯಶಸ್ವಿಯಾಗಿ ನಡೆದಿತ್ತು. ಈ ಸಮ್ಮೇಳನದಲ್ಲಿಯೇ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುತ್ತದೆ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದ್ದಾರೆ.
ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಕುರಿತು ಪೂರ್ವಭಾವಿ ಸಭೆಯನ್ನು ಅವರು ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ. ವಿ. ಜೆ ಶೋಭಾರಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಡಾ. ಮಹೇಶ್ ಜೋಶಿ ಮಾತನಾಡಿ, "ಬರುವ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಕನ್ನಡದ ನಾಡು-ನುಡಿ, ಭಾಷಾಭಿಮಾನ, ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಕನ್ನಡದ ತೇರನ್ನು ಎಳೆಯಲು ನಾವೆಲ್ಲರೂ ಸಿದ್ಧರಾಗೋಣ" ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: "ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರಿಗೆ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಹಬ್ಬ. ಕನ್ನಡದ ಇತಿಹಾಸವನ್ನು ಪ್ರಚುರಪಡಿಸುವುದು ಮತ್ತು ಭಾಷೆಯನ್ನು ಬೆಳೆಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಮುಖ್ಯವಾಗಿ ಸಮ್ಮೇಳನಗಳಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ, ಭಾಷೆ ಬೆಳವಣಿಗೆ, ಗಡಿ ಭಾಗದ ಶಾಲಾ ವಿಚಾರಗಳ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರದ ಮುಂದಿಡಲಾಗುತ್ತದೆ" ಎಂದರು.
"ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 5 ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈ ಹಿಂದೆ 1920ರಲ್ಲಿ ಮೊದಲ ಬಾರಿಗೆ ಅಖಂಡ ಜಿಲ್ಲೆಯ ಹೊಸಪೇಟೆಯಲ್ಲಿ ರೊದ್ದ ಶ್ರೀನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ 6ನೇ ಸಮ್ಮೇಳನ ನಡೆಯಿತು. ಎರಡನೇ ಬಾರಿಗೆ ಬಾರಿಗೆ 1926ರ ಮೇ 22 ರಿಂದ 24ರ ವರೆಗೆ ಮೂರು ದಿನಗಳ ಕಾಲ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ನಗರದಲ್ಲಿ ನಡೆದಿತ್ತು. ಇದರ ಅಧ್ಯಕ್ಷತೆಯನ್ನು ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ವಹಿಸಿದ್ದರು" ಎಂದು ಹೇಳಿದರು.
"12 ವರ್ಷಗಳ ನಂತರ ಮೂರನೇ ಬಾರಿಗೆ 1938ರ ಡಿ.29 ರಿಂದ 31ರ ವರೆಗೆ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ರಂಗನಾಥ್ ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ನಾಲ್ಕನೇ ಬಾರಿಗೆ ಹರಪನಹಳ್ಳಿಯಲ್ಲಿ 1947 ರಲ್ಲಿ ಸಿ. ಕೆ. ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು. ಬಳಿಕ 11 ವರ್ಷಗಳ ನಂತರ 1958 ರ ಜ. 18 ರಿಂದ 20 ರ ವರೆಗೆ ವಿನಾಯಕ್ ಕೃಷ್ಣ ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ 5ನೇ ಬಾರಿಗೆ ಸಮ್ಮೇಳನ ನಡೆಯಿತು. ಈಗ 67 ವರ್ಷದ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆತಿದೆ. 2025ರ ಡಿಸೆಂಬರ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ" ಎಂದು ತಿಳಿಸಿದರು.
ಡಾ. ಮಹೇಶ್ ಜೋಶಿ ಮಾತನಾಡಿ, "ಇಂದಿನ ಪೀಳಿಗೆಗೆ ಮತ್ತು ಯುವಸಮುದಾಯಕ್ಕೆ ಕನ್ನಡ ಸಾಹಿತ್ಯ ಬಗೆಗಿನ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ" ಎಂದರು.
"ಡಿಸೆಂಬರ್ ತಿಂಗಳಲ್ಲಿ ವಾತಾವರಣ ಮತ್ತು ಹವಮಾನವು ಚೆನ್ನಾಗಿರುವುದರಿಂದ ಆಯೋಜನೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಶಾಲಾ-ಕಾಲೇಜು, ವಸತಿ ನಿಲಯಗಳ ಮಕ್ಕಳು ಸೇರಿದಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು" ಎಂದು ಹೇಳಿದರು.
"ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಸಮ್ಮೇಳನ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಬಳ್ಳಾರಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸರ್. ಥಾಮಸ್ ಮುನ್ರೋ ಅವರ ಕುಟುಂಬಸ್ಥರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗುವುದು" ಎಂದು ಡಾ. ಮಹೇಶ್ ಜೋಶಿ ತಿಳಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, "ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಮತ್ತು ಅಚ್ಚು-ಕಟ್ಟಾಗಿ ಆಯೋಜಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು" ಎಂದರು.












Click it and Unblock the Notifications