ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ: ಇಬ್ರಾಹಿಂ
ಜಮಖಂಡಿ, ಅಕ್ಟೋಬರ್ 27: ವಿಕಟ ರಾಜಕಾರಣಿ ಎಂದೇ ಖ್ಯಾತರಾದ ಕಾಂಗ್ರೆಸ್‌ನ ಸಿಎಂ ಇಬ್ರಾಹಿಂ ತಮ್ಮ ವಿಕಟ ಭಾಷಣದಿಂದ ಮತ್ತೆ ಸುದ್ದಿ ಆಗಿದ್ದಾರೆ.
ನಿನ್ನೆ ಜಮಖಂಡಿ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, 'ಸಿದ್ದರಾಮಯ್ಯಗೆ ಜನರ ಚಿಂತೆ ಆದರೆ, ಯಡಿಯೂರಪ್ಪಗೆ ಶೋಭಾ ಕರಂದ್ಲಾಜೆಯದ್ದೇ ಚಿಂತೆ' ಎಂದು ಹೇಳಿದ್ದಾರೆ.
'ಚಕೋರಂಗೆ ಚಂದ್ರಮನ ಚಿಂತೆ, ಅಂಬುಜೆಗೆ ಬಾನುವಿನ ಚಿಂತೆ, ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ' ಎಂದ ಇಬ್ರಾಹಿಂ ತಮ್ಮ ಭಾಷಣದ ಪೂರಾ ವ್ಯಂಗ್ಯದ ಮೂಲಕ ಮೋದಿ ಹಾಗೂ ರಾಜ್ಯ ಬಿಜೆಪಿಯನ್ನು ಕುಟುಕಿದ್ದಾರೆ.

'ಮೋದಿ ತಿಂಗಳಿಗೊಮ್ಮೆ ಮನ್ ಕೀ ಬಾತ್ ಅಂತಾರೆ, ಆದರೆ ಮನ್ ಕೀ ಬಾತ್ ಮಾತನಾಡಬೇಕಾದದು, ಹುಡುಗ-ಹುಡುಗಿಯರು, ನೀವು ಜನ್ ಕೀ ಬಾತ್ ಮಾತಾಡ್ರಿ' ಎಂದು ಮೋದಿ ವಿರುದ್ಧವೂ ತಮ್ಮ ಮಾತಿನ ಬಾಣ ಎಸೆದಿದ್ದಾರೆ.

ಮೋದಿ ವಿರುದ್ಧವೂ ಟೀಕೆ
ಮೋದಿ ವಿರುದ್ಧ ಕಠು ಭಾಷೆಯನ್ನು ಬಳಸಿದ ಅವರು, ಕರೆಯದೇ ಬಂದವನ ಕೆರದಲಿ ಹೊಡಿ ಎಂದು ಸರ್ವಜ್ಞ ಹೇಳಿದ್ದಾರೆ. ನವಾಜ್ ಷರೀಫ್ ಕರೆಯದಿದ್ದರೂ ಮೋದಿ ಪಾಕಿಸ್ತಾನಕ್ಕೆ ಹೋಗಿದ್ದರು ಅವರಿಗೆ ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದರು.

ಜನರ ಭಾರಿ ಪ್ರತಿಕ್ರಿಯೆ
ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲಿಯೇ ಬಿಜೆಪಿ ವಿರುದ್ಧ ಹರಿಹಾಯ್ದ ಅವರ ಭಾಷಣಕ್ಕೆ ಜನರು ಚಪ್ಪಾಳೆ, ಶಿಳ್ಳೆಗಳ ಮೂಲಕ ಭರಪೂರ ಪ್ರತಿಕ್ರಿಯೆ ನೀಡಿದರು.

ವ್ಯಂಗ್ಯ ಭಾಷಣಕ್ಕೆ ಫೇಮಸ್ ಇಂಬ್ರಾಹಿಂ
ಇಬ್ರಾಹಿಂ ಅವರು ವ್ಯಂಗ್ಯಭರಿತ ಭಾಷಣಕ್ಕೆ ಖ್ಯಾತರು. ಮೊದಲು ಜೆಡಿಎಸ್‌ನಲ್ಲಿದ್ದ ಅವರು ಕಾಂಗ್ರೆಸ್‌ಗೆ ಪಕ್ಷಾಂತರ ಆಗಿ ಪರಿಷತ್ ಸದಸ್ಯರೂ ಆದರು. ವಚನ, ಜನಪದಗಳ ಮೇಲೆ ಹಿಡಿತ ಇರುವ ಅವರು ವ್ಯಂಗ್ಯದ ಮೂಲಕ ವಿರೋಧಿಗಳನ್ನು ಟೀಕಿಸುವುದರಲ್ಲಿ ಸಿದ್ದ ಹಸ್ತರು.

'ಯಡಿಯೂರಪ್ಪ ಹಾಜಿರ್ ಹೋ'
ಇಬ್ರಾಹಿಂ ಅವರು ಈ ಹಿಂದೆ ಬಿಜೆಪಿಯನ್ನು ಟೀಕಿಸಿ ಮಾಡಿದ್ದ 'ಯಡಿಯೂರಪ್ಪ ಹಾಜಿರ್ ಹೋ, ಕಟ್ಟಾ ಸುಬ್ರಹ್ಮಣ್ಯ ಹಾಜಿರ್ ಹೋ' ಭಾಷಣ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಜಮಖಂಡಿ ಉಪಚುನಾವಣೆ
ಜಮಖಂಡಿ ಕ್ಷೇತ್ರದ ಉಪಚುನಾವಣೆ ಬಾರಿ ಜಿದ್ದಾ-ಜಿದ್ದಿನಿಂದ ಕೂಡಿದ್ದು. ಕಾಂಗ್ರೆಸ್‌ನಿಂದ ಆನಂದ್ ನ್ಯಾಮಗೌಡ ಅವರು ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಉಸ್ತುವಾರಿಯನ್ನು ಪರಮೇಶ್ವರ್ ವಹಿಸಿಕೊಂಡಿದ್ದಾರೆ.












Click it and Unblock the Notifications