ಖಾಸಗಿ ವೈದ್ಯೆಯ ಯಡವಟ್ಟಿನಿಂದ ಬಲಗೈ ಕಳೆದುಕೊಂಡ ಗರ್ಭಿಣಿ
ಬಾಗಲಕೋಟೆ, ಜೂನ್.24: ಖಾಸಗಿ ವೈದ್ಯೆಯ ಯಡವಟ್ಟಿನಿಂದ ಐದು ತಿಂಗಳ ಗರ್ಭಿಣಿಯ ಬಲಗೈ ಕಟ್ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ಇಳಕಲ್ ತಾಲೂಕಿನ ಚಿಕ್ಕ ಕೊಡಗಲಿ ಗ್ರಾಮದ ನಿವಾಸಿ ಶಿಲ್ಪಾ ಭಜಂತ್ರಿ ಎಂಬ ಮಹಿಳೆಯೇ ಬಲಗೈ ಕಳೆದುಕೊಂಡ ನತದೃಷ್ಠ ಗರ್ಭಿಣಿ.
ಇಳಕಲ್ ನಗರದ ಸಂಜೀವಿನಿ ಶಾವಿ ಖಾಸಗಿ ಆಸ್ಪತ್ರೆಯ ವೈದ್ಯೆ ಶೋಭಾ ಅವರ ಯಡವಟ್ಟಿನಿಂದ ಈ ಘಟನೆ ಸಂಭವಿಸಿದೆ ಎಂದು ಶಿಲ್ಪಾ ಭಜಂತ್ರಿ ಸಂಬಂಧಿಕರು ಆರೋಪಿಸಿದ್ದಾರೆ.

ಕಳೆದ ಜೂನ್ ನಾಲ್ಕರಂದು ಗರ್ಭಿಣಿ ಶಿಲ್ಪಾ ಭಜಂತ್ರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೀವಿನಿ ಶಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ರಕ್ತ ಅಳವಡಿಕೆ ವೇಳೆ ನಂಜು ಕಾಣಿಸಿಕೊಂಡು ಗುಳ್ಳೆ ಎದ್ದು ಕೈ ಬಾವು ಬಂದಿತ್ತು. ಈ ಗಾಯ ಕೊನೆಗೆ ಗ್ಯಾಂಗ್ರೀನ್ ಗೆ ತಿರುಗಿತು.
ಗಾಯ ಗ್ಯಾಂಗ್ರೀನ್ ಗೆ ತಿರುಗಿದ್ದಂತೆ ಬಾಗಲಕೋಟೆ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಶಿಲ್ಪಾ ಭಜಂತ್ರಿಯನ್ನು ದಾಖಲಿಸಲಾಗಿದೆ. ಆಗ ಗರ್ಭಿಣಿಯಾಗಿದ್ದ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಬಲಗೈ ಕಟ್ ಮಾಡಲಾಗಿದೆ.
ಸದ್ಯ ಶಿಲ್ಪಾ ಭಜಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯ ಪೋಷಕರು ವೈದ್ಯೆ ಶೋಭಾ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ.












Click it and Unblock the Notifications