ಬಾಗಲಕೋಟೆ: ಅರಣ್ಯಾಧಿಕಾರಿಗಳನ್ನು ಸತಾಯಿಸಿ ಕೊನೆಗೂ ಸೆರೆ ಸಿಕ್ಕ ಮೊಸಳೆ
ಬಾಗಲಕೋಟೆ, ಅಕ್ಟೋಬರ್ 7: ಕಳೆದ ನಾಲ್ಕೈದು ದಿನಗಳಿಂದ ಹೊಸ ಮುರನಾಳ ಗ್ರಾಮದ ಕೆರೆಯಲ್ಲಿ ವಾಸವಾಗಿದ್ದ ಬೃಹತ್ ಮೊಸಳೆಯನ್ನು ಕಡೆಗೂ ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಘಟಪ್ರಭಾ ನದಿ ತೀರದಲ್ಲಿದ್ದ ಮುರನಾಳ ಗ್ರಾಮ ಮುಳುಗಡೆಯ ಬಳಿಕ ಸ್ಥಳಾಂತರಗೊಂಡಿತ್ತು. ಅದು ನದಿ ತೀರದಿಂದ ಸುಮಾರು 10 ಕಿ.ಮೀ ದೂರದಲ್ಲಿ ಅದರಲ್ಲೂ ಜನನಿಬೀಡ ಪ್ರದೇಶದಲ್ಲಿ ಹೊಸ ಮುರನಾಳ ಗ್ರಾಮ ಮರಳಿ ಅಸ್ತಿತ್ವ ಪಡೆದುಕೊಂಡಿದೆ. ಹೀಗಿರುವಾಗ ಮುರನಾಳ ಗ್ರಾಮದ ಕೆರೆಯಲ್ಲಿ ಬೃಹತ್ ಮೊಸಳೆ ಕಾಣಿಸಿಕೊಂಡಿರುವುದು ಅಚ್ಚರಿಯ ಜೊತೆಗೆ ಭೀತಿಯನ್ನು ಉಂಟು ಮಾಡಿತ್ತು.
ಗ್ರಾಮದ ಯುವಕರು ಡ್ರೋನ್ ಮೂಲಕ ಕೆರೆ ಚಿತ್ರಿಕರಿಸುವಾಗ ಮೊಸಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ತಕ್ಷಣ ಯುವಕರು ಮೊಸಳೆ ಹೋಗುವುದನ್ನ ಕೆಲವು ಸೆಕೆಂಡುಗಳವರೆಗೆ ಸೆರೆ ಹಿಡಿದಿದ್ದರು. ಈ ಕೆರೆ ಊರ ಮದ್ಯದಲ್ಲೇ ಇರುವುದಿರಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ನಿತ್ಯ ಗ್ರಾಮದ ದನಕರುಗಳು ಇದೆ ಕೆರೆಯಲ್ಲೇ ನೀರು ಕುಡಿಯುತ್ತಿದ್ದವು. ಆದರೆ ಮೊಸಳೆ ಇವರೆಗೂ ಯಾವುದೇ ತೊಂದರೆ ಮಾಡಿರದಿದ್ದಕ್ಕೆ ಮೊಸಳೆ ಇರುವ ವಿಚಾರ ಯಾರಿಗೂ ತಿಳಿದಿರಲಿಲ್ಲ.

ಕೆರೆಯ ಅಕ್ಕಪಕ್ಕದಲ್ಲಿ ಮನೆಗಳು ಹಾಗೂ ಶಾಲೆ ಕೂಡ ಇದ್ದಿದ್ದರಿಂದ ಗ್ರಾಮಸ್ಥರು ಕಳೆದ ಮೂರು ನಾಲ್ಕು ದಿನಗಳಿಂದ ನಿದ್ದೆಯಿಲ್ಲದೆ ಚಡಪಡಿಸಿ ಅರಣ್ಯ ಇಲಾಖೆಯವರಿಗೆ ಮೊಸಳೆಯನ್ನು ಹಿಡಿಯಲು ಒತ್ತಾಯಿಸಿದ್ದರು. ಇನ್ನು ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಗ್ರಾಮಪಂಚಾಯಿತಿ ವತಿಯಿಂದ ಕೆರೆಯ ಬಳಿ ಯಾರು ಸುಳಿಯದಂತೆ ಎಚ್ಚರಿಕೆ ಫಲಕವನ್ನು ಹಾಕಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಕಳೆದ ನಾಲ್ಕೈದು ದಿನಗಳಿಂದ ಮೊಸಳೆಯೊಂದು ವಾಸವಾಗಿದ್ದ ಮೊಸಳೆ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಕೆರೆಯಲ್ಲಿ ಮೊಸಳೆಗಾಗಿ ಶೋಧ ನಡೆಸಿದರೂ ಮೊಸಳೆ ಮಾತ್ರ ಸಿಗದೇ ಆಟವಾಡಿಸಿತ್ತು. ಆದರೆ ಶನಿವಾರ ಕೆರೆ ಸುತ್ತಲೂ ಇದ್ದ ಪೊದೆಗಳನ್ನು ಜೆಸಿಬಿ ಮೂಲಮ ತೆರವು ಮಾಡಿ ಮೊಸಳೆ ಕೆರೆ ಬಿಟ್ಟು ಹೋಗದಂತೆ ಬಲೆ ಹಾಕಲಾಗಿತ್ತು.

ಕೊನೆಗೆ ಬಲೆಗೆ ಮೊಸಳೆ ಬಿದ್ದಿರುವುದು ಖಚಿತವಾಗಿದ್ದು, ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಗಳು ತೆಪ್ಪದಲ್ಲಿ ತೆರಳಿ ಬಲೆಯಲ್ಲಿ ಸಿಲುಕಿದ್ದ ಮೊಸಳೆಯನ್ನು ಸೆರೆ ಹಿಡಿದುಕೊಂಡು ಬಂದಿದ್ದಾರೆ. ಅಲ್ಲದೇ ಸುರಕ್ಷಿತ ಸ್ಥಳಕ್ಕೆ ಹೋಗಿ ಬಿಟ್ಟಿದ್ದಾರೆ. ಇನ್ನು ತಮ್ಮೂರಿನ ಕೆರೆಯಲ್ಲಿ ಮೊಸಳೆ ಇದ್ದ ಬಗ್ಗೆ ಆತಂಕದಿಂದ ಇದ್ದ ಮುರನಾಳ ಗ್ರಾಮಸ್ಥರಲ್ಲಿ ಈಗ ಭಯ ದೂರಾಗಿದೆ.
ಇನ್ನು ಶುಕ್ರವಾರ ಕುಡಕನೊಬ್ಬ ಕೆರೆಯಲ್ಲಿನ ಮೊಸಳೆ ಹಿಡಿಯುತ್ತೇನೆ ಎಂದು ಕೆರೆಗೆ ಧುಮುಕಿ ದುಸ್ಸಾಹಸ ಮೆರೆದ ಘಟನೆಯೂ ನಡೆದಿತ್ತು. ಮೌಲಾಸಾಬ್ ವಾಲೀಕಾರ್ ಎಂಬಾತ ಕುಡಿದ ಮತ್ತಿನಲ್ಲಿ ಮುರನಾಳನದಲ್ಲಿರುವ ಕೆರೆಯಲ್ಲಿರುವ ಮೊಸಳೆ ಕೊಲ್ಲುತ್ತೇನೆ ಎಂದು ಕೆರೆಗೆ ಜಿಗಿದಿದ್ದಾನೆ. ಬಳಿಕ ಕಾಪಾಡಿ ಎಂದು ಕಿರುಚಾಡಿದಾಗ ಗ್ರಾಮದ ಮತ್ತೊಬ್ಬರು ಕೆರೆಗೆ ಧುಮುಕಿ ಮೌಲಾಸಾಬ್ ನನ್ನು ರಕ್ಷಿಸಿದ್ದರು.












Click it and Unblock the Notifications