ಆಪರೇಷನ್ ಕಮಲಕ್ಕೆ ಡಿಕೆ ಶಿವಕುಮಾರ್ ಬಲಿಯಾಗಲ್ಲ :ಕೃಷ್ಣ ಬೈರೇಗೌಡ
ಬಾಗಲಕೋಟೆ, ನವೆಂಬರ್ 29: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಡಿಕೆ ಶಿವಕುಮಾರ್ ಭೇಟಿಯಲ್ಲಿ ಹಲವರು ಹಲವಾರು ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ ಆದರೆ ಅದು ಸತ್ಯ ಅಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಯಡಿಯೂರಪ್ಪ ಅವರು ಬುಧವಾರ ಶಾಸಕ ಹಾಲಪ್ಪ ಹಾಗೂ ಬಿವೈ ರಾಘವೇಂದ್ರ ಅವರ ಜೊತೆ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.
ಅವರ ಭೇಟಿಯ ಉದ್ದೇಶವೇ ಬೇರೆಯಾಗಿದ್ದು ಸಾಗರದ ಸಿಗಂದೂರಿನಲ್ಲಿ ಸೇತುವೆ ನಿರ್ಮಾಣ ಹಾಗೂ ಜಿಲ್ಲೆಯ ನೀರಾವರಿಗೆ ಸಂಬಂಧಿಸಿದಂತೆ ಚರ್ಚಿಸಲು ಯಡಿಯೂರಪ್ಪ ಅವರು ತೆರಳಿದ್ದರು ಇನ್ಯಾವುದೇ ಉದ್ದೇಶ ಇರಲಿಲ್ಲ, ಡಿಕೆ ಶಿವಕುಮಾರ್ ಅವರು ಯಾವುದೇ ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಹಾಗೂ ಮಾಧ್ಯಮಗಳು ಆಪರೇಷನ್ ಕಮಲವನ್ನು ಆಕಾಶದ ಮಟ್ಟಕ್ಕೆ ಬೆಳೆಸಿವೆ, ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಕ್ಷಣಗಣನೆ ನಡೆಯುತ್ತಲಿದೆ. ಬಿಜೆಪಿ ಗಂಟೆ, ಈ ದಿನಾಂಕ, ಈ ಘಳಿಗೆ ಸಹಿತ ಗಡುವು ಕೊಡುತ್ತಾ ಬಂದಿವೆ. ಸರ್ಕಾರ ಆರು ತಿಂಗಳು ಪೂರೈಸಿದೆ. ಅದೇ ರೀತಿ ನಮ್ಮ ಕೆಲಸವನ್ನು ಐದು ವರ್ಷ ಮಾಡುತ್ತೇವೆ ನಮಗೆ ಭರವಸೆ ಇದೆ ಎಂದು ಹೇಳಿದರು.
ಜನರ ನಿರೀಕ್ಷೆಯಂತೆ ಸರ್ಕಾರವು ಇನ್ನೂ ಕೆಲಸ ಮಾಡಬೇಕಿದೆ, ಆಡಳಿತವನ್ನೂ ಚುರುಕುಗೊಳಿಸಬೇಕಿದೆ, ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ಹೇಳಿದರು.












Click it and Unblock the Notifications