ಸಂಧಾನ ಸಭೆ ವಿಫಲ: ಕಬ್ಬಿಗೆ ಸೂಕ್ತ ಬೆಲೆ ಆಗ್ರಹಿಸಿ ಮುಧೋಳ ಬಂದ್
ಬಾಗಲಕೋಟೆ, ನವೆಂಬರ್ 16: ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ನೀಡಿರುವ ಮುಧೋಳ ನಗರ ಬಂದ್ ಕರೆ ಯಶಸ್ವಿಯಾಗಿದೆ. ಮುಧೋಳ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಸಚಿವರ ನೇತೃತ್ವದಲ್ಲಿ ನಡೆದ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಮುಧೋಳ ಪಟ್ಟಣ ಬಂದ್‌ಗೆ ಕರೆ ನೀಡಿತ್ತು.
ರೈತ ಸಂಘದ ಬಂದ್ ಕರೆಗೆ ಮುಧೋಳ ನಗರದ ಜನರು ಬೆಂಬಲ ನೀಡಿದ್ದಾರೆ. ಮುಧೋಳ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಇನ್ನು ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿಗೆ ಆಗ್ರಹಿಸಿ ಮುಧೋಳ ತಾಲೂಕಿನ ಅನೇಕ ಭಾಗಗಳಲ್ಲಿ ರೈತರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಜಮಾಯಿಸಿದ ರೈತರು, ಮುಧೋಳ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಮುಧೋಳ ಮಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ಮುಳ್ಳಿನ ಬೇಲಿ ಹಾಕಿ ರಸ್ತೆ ಬಂದ್ ಮಾಡಿ ರೈತರು ಪ್ರತಿಭಟಿಸಿದ್ದಾರೆ. ಬೆಳಗಲಿ, ಮಂಟೂರ ಶಿರೋಳ, ಬುದ್ನಿ ಪಿಎಮ್ ಗ್ರಾಮಗಳ ರೈತರು, ಹೆದ್ದಾರಿ ಬಂದ್ ಮಾಡಿ ರಸ್ತೆಯ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದ ರೈತರು, ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಕಬ್ಬಿನ ಬೆಲೆ ನಿಗದಿ ಮಾಡದ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದ ರೈತರು, ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ.

ಕಬ್ಬು ಬೆಲೆ ನಿಗದಿ ವಿಚಾರವಾಗಿ ರೈತ ಸಂಘಟನೆಗಳಿಂದ ಮುಧೋಳ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಮುಧೋಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಸ್‌ಪಿ ಜಯಪ್ರಕಾಶ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮುಧೋಳ ಭದ್ರತೆಗಾಗಿ 3 ಡಿವೈಎಸ್‌ಪಿ, 11 ಸಿಪಿಐ, 30 ಜನ ಪಿಎಸ್‌ಐ ಹಾಗೂ 76 ಜನ ಎಎಸ್ ಐ, 626 ಪೊಲೀಸ್ ಸಿಬ್ಬಂದಿ, ಹತ್ತು ಡಿಆರ್ ಹಾಗೂ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.












Click it and Unblock the Notifications