ಖಾಸಗಿ ಸಂಸ್ಥೆಯಲ್ಲೂ ಸ್ಥಳೀಯರಿಗೆ ಮೀಸಲಾತಿ: ಜಗನ್ ಮಹತ್ವದ ನಿರ್ಣಯ
ಅಮರಾವತಿ, ಜುಲೈ 23: ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಆಗುತ್ತಿಲ್ಲ, ಆದರೆ, ಆಂಧ್ರಪ್ರದೇಶದಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಆಂಧ್ರಪ್ರದೇಶದ ಔದ್ಯೋಗಿಕ ವಲಯದಲ್ಲಿ ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವಂತೆ ಕಾನೂನು ಜಾರಿಗೆ ತಂದಿರುವ ಜಗನ್ ರೆಡ್ಡಿ ಅವರು ಇಲಾಖೆಗೆ ಆದೇಶವನ್ನು ಕಳಿಸಿದ್ದಾರೆ.

ಹೊಸ ನಿಯಮದ ಪ್ರಕಾರ, "ಖಾಸಗಿ ಸಂಸ್ಥೆ, ಕಾರ್ಖಾನೆ, ಸರ್ಕಾರ-ಖಾಸಗಿ ಸಹಭಾಗಿತ್ವದ ಸಂಸ್ಥೆಗಳಲ್ಲಿ ಸ್ಥಳೀಯ ಯುವ ಪ್ರತಿಭಾವಂತರಿಗೆ ಶೇ.75 ಮೀಸಲಾತಿ ನೀಡಬೇಕಾಗುತ್ತದೆ. ಸ್ಥಳೀಯರಿಗೆ ಕೌಶಲ್ಯವಿಲ್ಲ ಎಂಬ ಕಾರಣ ನೀಡುವ ಹಾಗಿಲ್ಲ ಎಂದು ನಿಬಂಧನೆ ಹೂಡಲಾಗಿದೆ"
ಪಾದಯಾತ್ರೆ ವೇಳೆ ನೀಡಿದ್ದ ಆಶ್ವಾಸನೆ:
ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಪಾದಯಾತ್ರೆ ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿದ್ದರು. ಈ ಸಂದರ್ಭದಲ್ಲಿ "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ" ಎಂಬುದು ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದೆ.
ಇದೇ ವೇಳೆಯಲ್ಲಿ ಯುವ ಪ್ರತಿಭಾವಂತರಿಗೆ ಅವಕಾಶ ನೀಡಿದ ಜಗನ್ ಅವರು, ವೈಎಸ್ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 'ಉದ್ಯೋಗ ಮೀಸಲಾತಿ' ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಈ ನಿರ್ಣಯದ ಲಾಭವು ನೇರವಾಗಿ ಕೈಗಾರಿಕಾ ವಲಯಕ್ಕಾಗಿ ತಮ್ಮ ಸ್ವಂತ ಜಮೀನು ಕಳೆದುಕೊಂಡವರಿಗೆ ತಲುಪಬೇಕಿದೆ ಎಂದು ಜಗನ್ ಬಯಸಿದ್ದಾರೆ.












Click it and Unblock the Notifications