ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಇದು ಅಂತಿಂಥ ಮುಖಭಂಗವಲ್ಲ!
ಅಮರಾವತಿ, ಮೇ 23: ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಮಮತಾ ಬ್ಯಾನರ್ಜಿ ನಂತರ ಮೋದಿ ವಿರುದ್ದ ಎಗ್ಗಿಲ್ಲದೇ ಕಿಡಿಕಾರುತ್ತಿದ್ದ ಮುಖಂಡರೆಂದರೆ ಅದು ಚಂದ್ರಬಾಬು ನಾಯ್ಡು. ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಲು ಅವರು ಪಡುತ್ತಿದ್ದ ಪ್ರಯತ್ನ ಅಂತಿಂದಲ್ಲ. ಈಗ, ಈ ಎಲ್ಲಾ ಪ್ರಯತ್ನಗಳು ಠುಸ್ ಆಗಿದೆ.
ಕಳೆದ ಬಾರಿ ಅಂದರೆ 2014ರಲ್ಲಿ ಎನ್ಡಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡು ಚುನಾವಣೆ ಎದುರಿಸಿದ್ದ ತೆಲುಗುದೇಶಂ ಪಕ್ಷ ಹದಿನೈದು ಸ್ಥಾನವನ್ನು ಗೆದ್ದಿತ್ತು. ಈ ಬಾರಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಟಿಡಿಪಿ ನೆಲಕ್ಕಚ್ಚಿದೆ.
ವೈಎಸ್ಆರ್ ಕಾಂಗ್ರೆಸ್ ಆರ್ಭಟಕ್ಕೆ ಧೂಳೀಪಟವಾಗಿರುವ ತೆಲುಗುದೇಶಂ ಒಟ್ಟು 25ಸ್ಥಾನದಲ್ಲಿ, ಇದುವರೆಗಿನ ಟ್ರೆಂಡಿಂಗ್ ಪ್ರಕಾರ, ಕೇವಲ ಒಂದು ಸ್ಥಾನದಲ್ಲಿ ಮುನ್ನಡೆಯನ್ನು ಕಾಯ್ಡುಕೊಂಡಿದೆ.

ಟಿಡಿಪಿ ಪರಿಸ್ಥಿತಿ ಅಷ್ಟೇ ಹೀನಾಯವಾಗಿದೆ
ಇನ್ನು,ಅಸೆಂಬ್ಲಿ ಚುನಾವಣೆಯಲ್ಲೂ ಟಿಡಿಪಿ ಪರಿಸ್ಥಿತಿ ಅಷ್ಟೇ ಹೀನಾಯವಾಗಿದೆ. 175 ಸದಸ್ಯ ಬಲದ ಆಂಧ್ರಪ್ರದೇಶದಲ್ಲಿ 130ಕ್ಕೂ ಹೆಚ್ಚು ಕಡೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಮುನ್ನಡೆಯಲ್ಲಿದೆ. 23ಸ್ಥಾನದಲ್ಲಿ ಲೀಡಿಂಗ್ ನಲ್ಲಿರುವ ಟಿಡಿಪಿ ಕಳೆದ ಬಾರಿ 102ಸ್ಥಾನದಲ್ಲಿ ಗೆದ್ದಿತ್ತು.

ಚಂದ್ರಬಾಬು ನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ
ಪಕ್ಷದ ಹೀನಾಯ ಸೋಳಿಗೆ ನೈತಿಕ ಹೊಣೆ ಹೊತ್ತು ಚಂದ್ರಬಾಬು ನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಗುರುವಾರ ಸಂಜೆ ಆಂಧ್ರಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಬಹುಮತಕ್ಕೆ 88 ಸ್ಥಾನಗಳಲ್ಲಿ ಜಯ ಗಳಿಸಬೇಕು
175 ಸದಸ್ಯ ಬಲದ ಆಂಧ್ರಪ್ರದೇಶದಲ್ಲಿ ಬಹುಮತಕ್ಕೆ 88 ಸ್ಥಾನಗಳಲ್ಲಿ ಜಯ ಗಳಿಸಬೇಕು. ವೈಎಸ್ ಆರ್ ಕಾಂಗ್ರೆಸ್ ಈ ಸಂಖ್ಯೆಯನ್ನು ಬಹಳ ಸುಲಭವಾಗಿ ದಾಟುವುದು ಖಾತ್ರಿಯಾಗಿದೆ. ಮೇ ಮೂವತ್ತನೇ ತಾರೀಕಿಗೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.

ವೈಎಸ್ ಆರ್ ಕಾಂಗ್ರೆಸ್ ಪಕ್ಷ ಭಾರೀ ಜಯಭೇರಿಯತ್ತ ದಾಪುಗಾಲು
ಆಂಧ್ರಪ್ರದೇಶ ವಿಧಾನಸಭೆಯ ಚುನಾವಣೆ ಫಲಿತಾಂಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಭಾರೀ ಜಯಭೇರಿಯತ್ತ ದಾಪುಗಾಲು ಹಾಕುತ್ತಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಬಹುದು ಎಂಬ ನಿರೀಕ್ಷೆ ಇತ್ತು, ಅದೀಗ ಹುಸಿಯಾಗಿದೆ.

ಪವನ್ ಕಲ್ಯಾಣ್
ಪವನ್ ಕಲ್ಯಾಣ್ ನೇತೃತ್ವದ ಜನಾಸೇನಾ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದರು. ಇದುವರೆಗೂ ಜನಸೇನಾ ಪಕ್ಷದ ಯಾವ ಅಭ್ಯರ್ಥಿಯೂ ಮುನ್ನಡೆ ಕಾಯ್ಡುಕೊಂಡಿಲ್ಲ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications