ಆಂಧ್ರ ರಾಜಧಾನಿ 'ಅಮರಾವತಿ' ಕನಸಿನ ಯೋಜನೆ ಕಾಮಗಾರಿಗೆ ಸಿಕ್ತು ಚಾಲನೆ!
ಅಮರಾವತಿ, ಏ. 27: ಆಂಧ್ರ ಪ್ರದೇಶದ ಕನಸಿನ ರಾಜಧಾನಿ 'ಅಮರಾವತಿ'ಯನ್ನು ಅರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಹೈಕೋರ್ಟ್ ಜಗನ್ ಸರ್ಕಾರಕ್ಕೆ ಗುಡುವು ನೀಡಿದ ಬೆನ್ನಲ್ಲೇ ಆಂಧ್ರ ಪ್ರದೇಶ ಕನಸಿನ ರಾಜಧಾನಿ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಶರವೇಗ ಸಿಕ್ಕಿದೆ.
ನಾನಾ ಕಾರಣದಿಂದ ಸ್ಥಗಿತಗೊಂಡಿದ್ದ ಅಮರಾವತಿ ರಾಜಧಾನಿ ನಿರ್ಮಾಣದ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ.
ಅಮರಾವತಿ ರಾಜಧಾನಿ ನಿರ್ಮಾಣ ಯೋಜನೆ ಸಂಬಂಧ ಆಂಧ್ರ ಪ್ರದೇಶ ಹೈಕೋರ್ಟ್ ಒಂದೂವರೆ ತಿಂಗಳ ಹಿಂದೆ ಮಹತ್ವದ ತೀರ್ಪು ನೀಡಿತ್ತು. ಅಮರಾವತಿ ರಾಜಧಾನಿ ನಿರ್ಮಾಣ ಸಂಬಂಧ ಸ್ಥಗಿತಗೊಂಡಿರುವ ಯೋಜನೆಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ನ್ಯಾಯಾಲಯದ ತೀರ್ಪು ಹೊರ ಬಿದ್ದ ಒಂದೂವರೆ ತಿಂಗಳ ಬಳಿಕ ಅಮರಾವತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಪೂರ್ಣ ಮಾಡುವ ಕೆಲಸ ಆರಂಭಿಸಲಾಗಿದೆ. ಎಂಎಲ್ಎ ಮತ್ತು ಎಂಎಲ್‌ಸಿ ಗಳ ವಸತಿ ಸಮುಚ್ಛಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಶಾಸಕರ ಬಂಗಲೆಗಳಿಗೆ ಟೈಲ್ಸ್ ಹಾಕುವ ಕಾರ್ಯ ಮುಂದುವರೆದಿದೆ. ಇದರ ಜೊತೆ ಜೊತೆಯಲ್ಲಿ ನೀರಿನ ಸಂಪರ್ಕ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಎಳೆಯಲಾಗುತ್ತಿದೆ. ಕಳೆದ ಮೂರು ದಿನದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಪರಿಹಾರ ವಿಚಾರದಲ್ಲಿ ಹೈಕೋರ್ಟ್ ಮಧ್ಯ ಪ್ರವೇಶದಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಅಮರಾವತಿ ಯೋಜನೆಗೆ ಭೂಮಿ ಕೊಟ್ಟವರು ಸಂತಸಗೊಂಡಿದ್ದಾರೆ. ಕಾರ್ಮಿಕರಿಗೆ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದ್ದಾರೆ. ಹೈಕೋರ್ಟ್ ಮಧ್ಯ ಪ್ರವೇಶದಿಂದ ನಮಗೆ ನ್ಯಾಯ ಒದಗಿಸುವ ಭರವಸೆ ನಮಗಿದೆ. ನಮಗೆ ಸರ್ಕಾರ ಹೇಳಿದ ರೀತಿ ಪ್ಲಾಟ್ ಗಳನ್ನು ಅಭಿವೃದ್ಧಿ ಪಡಿಸಿ ತ್ವರಿತವಾಗಿ ನೀಡಬೇಕು. ಅವುಗಳಿಗೆ ಮೂಲ ಸೌಕರ್ಯಗಳನ್ನು ಬೇಗ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಮಾ. 03 ರಂದು ಆಂಧ್ರ ಪ್ರದೇಶ ಹೈಕೋರ್ಟ್ ಜಗನ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆರು ತಿಂಗಳಲ್ಲಿ ಅಮರಾವತಿ ರಾಜಧಾನಿ ನಿರ್ಮಾಣದ ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಿತ್ತು. ಅಭಿವೃದ್ಧಿ ಪಡಿಸಿರುವ ಪ್ಲಾಟ್ ಗಳನ್ನು ಮೂಲ ಸೌಕರ್ಯಗಳೊಂದಿಗೆ ಭೂಮಿ ನೀಡಿದ ರೈತರಿಗೆ ಮೂರು ತಿಂಗಳಲ್ಲಿ ನೀಡುವಂತೆ ನಿರ್ದೇಶನ ನೀಡಿತ್ತು. ಕೋರ್ಟ್ ಮಧ್ಯ ಪ್ರವೇಶದಿಂದ ಅಮರಾವತಿ ನಿರ್ಮಾಣಕ್ಕೆ ಎದುರಾಗಿದ್ದ ತೊಡಕು ಇತ್ಯರ್ಥವಾಗಿದೆ.
ಮಾಹಿತಿ ಕೃಪೆ: The news minute












Click it and Unblock the Notifications