Breaking; ಅಹಮದಾಬಾದ್‌ಗೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್
ಅಹಮದಾಬಾದ್, ಏಪ್ರಿಲ್ 21; ಎರಡು ದಿನಗಳ ಭಾರತ ಭೇಟಿಗಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ.
ಗುರುವಾರ ಬೆಳಗ್ಗೆ ಬೋರಿಸ್ ಜಾನ್ಸನ್ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರತ್, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜಾನ್ಸನ್ ಸ್ವಾಗತಿಸಿದರು.

ಬೋರಿಸ್ ಜಾನ್ಸನ್ ಇಂದು ಅಹಮದಾಬಾದ್‌ನಲ್ಲಿ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಅವರು ದೆಹಲಿಗೆ ತೆರಳಲಿದ್ದಾರೆ.
ಬೋರಿಸ್ ಜಾನ್ಸನ್ ಇಡೀ ದಿನ ಅಹಮದಾಬಾದ್‌ನಲ್ಲಿ ಇರಲಿದ್ದು, ಹಯಾತ್ ರೆಜೆನ್ಸಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ನಿಂದ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.
ಹೋಟೆಲ್‌ನಿಂದ ಆಶ್ರಮಕ್ಕೆ ತೆರಳುವಾಗ ಚಿಕ್ಕ ರೋಡ್ ಶೋ ಸಹ ನಡೆಸಲಿದ್ದಾರೆ. ಜಾನ್ಸನ್ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿಯನ್ನು ಸಹ ಭೇಟಿ ಮಾಡಲಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ರಕ್ಷಣೆ, ರಾಜತಾಂತ್ರಿಕ ಸಂಬಂಧ, ಆರ್ಥಿಕ ಸಹಭಾಗಿತ್ವದ ಕುರಿತು ನರೇಂದ್ರ ಮೋದಿ ಮತ್ತು ಬೋರಿಸ್ ಮಾತುಕತೆ ನಡೆಸಲಿದ್ದಾರೆ.
ಅಹಮದಾಬಾದ್‌ನಿಂದ ಹೆಲಿಕಾಪ್ಟರ್ ಮೂಲಕ ಬೋರಿಸ್ ವಡೋದರಾಗೆ ತೆರಳಲಿದ್ದು, ಜೆಸಿಬಿ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅಹಮದಾಬಾದ್‌ಗೆ ವಾಪಸ್ ಆಗಲಿದ್ದಾರೆ.
ಗಾಂಧಿನಗರದಲ್ಲಿ ಗಿಫ್ಟ್ ಸಿಟಿಗೆ ಅವರು ಭೇಟಿ ನೀಡಲಿದ್ದಾರೆ. ಗಾಂಧಿ ನಗರದ ಅಕ್ಷರಧಾಮ ದೇವಾಲಯಕ್ಕೆ ಸಹ ಬೋರಿಸ್ ಭೇಟಿ ನೀಡುವ ಕಾರ್ಯಕ್ರಮವಿದೆ.












Click it and Unblock the Notifications