ಜ.18ರಂದು ಅಹ್ಮದಾಬಾದ್, ಸೂರತ್ ಮೆಟ್ರೋ ರೈಲು ಯೋಜನೆಗೆ ಭೂಮಿ ಪೂಜೆ
ಅಹಮದಾಬಾದ್, ಜನವರಿ 17: ದೇಶದ ವಿವಿಧ ಪ್ರದೇಶಗಳಿಂದ ಏಕತೆಯ ಪ್ರತಿಮೆಗೆ ತಡೆರಹಿತ ರೈಲು ಸಂಪರ್ಕ ಸೌಲಭ್ಯ ಹಾಗೂ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಹಸಿರು ನಿಶಾನೆ ತೋರಲಿದ್ದಾರೆ. ಜೊತೆಗೆ ಜನವರಿ 18ರಂದು ಅಹ್ಮದಾಬಾದ್, ಸೂರತ್ ಮೆಟ್ರೋ ರೈಲು ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಎರಡನೇ ಹಂತವು 28. 25 ಕಿ.ಮೀ ದೂರದಾಗಿದ್ದು ,ಎರಡು ಕಾರಿಡಾರ್ ಹೊಂದಿದೆ. 22.8 ಉದ್ದದ ಮೊದಲ ಕಾರಿಡಾರ್ ಮೊಟೆರಾ ಸ್ಟೇಡಿಯಂನಿಂದ ಮಹಾತ್ಮ ಮಂದೀರ್ ತನಕ ಇದ್ದರೆ, ಎರಡನೇ ಕಾರಿಡಾರ್ 5.4 ಕಿ. ಮೀ ದೂರದಾಗಿದ್ದು, ಜಿಎನ್ ಎಲ್ ಯುನಿಂದ ಜಿಐಎಫ್ ಟಿ ನಗರ ತನಕ ಇರಲಿದೆ. ಒಟ್ಟಾರೆ, ಎರಡನೇ ಹಂತದ ಯೋಜನಾ ವೆಚ್ಚ 5,384 ಕೋಟಿ ರು ಆಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
ಸೂರತ್ ಮೆಟ್ರೋ ರೈಲು ಯೋಜನೆ ಒಟ್ಟು 40.35 ಕಿ.ಮೀ ದೂರದಾಗಿದ್ದು, ಇದು ಕೂಡಾ ಎರಡು ಕಾರಿಡಾರ್ ಹೊಂದಿದೆ. 21.61ಉದ್ದದ ಮೊದಲ ಕಾರಿಡಾರ್ ಸರ್ಥಾನಾ ದಿಂದ ಡ್ರೀಮ್ ಸಿಟಿ ತನಕ ಇದ್ದರೆ, ಎರಡನೇ ಕಾರಿಡಾರ್ 18.74 ಕಿ. ಮೀ ದೂರದಾಗಿದ್ದು, ಭೇಸಾನ್ ನಿಂದಸರೋಲಿ ತನಕ ಇರಲಿದೆ. ಒಟ್ಟಾರೆ, ಈ ಮೆಟ್ರೋ ರೈಲು ಯೋಜನಾ ವೆಚ್ಚ 12,020 ಕೋಟಿ ರು ಆಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

8 ರೈಲುಗಳಿಗೆ ಹಸಿರು ನಿಶಾನೆ: ದೇಶದ ವಿವಿಧ ಪ್ರದೇಶಗಳಿಂದ ಕೇವಾಡಿಯಾಕ್ಕೆ ಸಂಪರ್ಕ ಕಲ್ಪಿಸುವ 8 ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳು ಏಕತೆಯ ಪ್ರತಿಮೆಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸುತ್ತವೆ.
ದಭೋಯ್ - ಚಾಂದೋಡ್ ನಡುವೆ ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾದ ಮಾರ್ಗ, ಚಾಂದೋಡ್ - ಕೇವಾಡಿಯ ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗ, ಹೊಸದಾಗಿ ವಿದ್ಯುದ್ದೀಕರಣ ಮಾಡಲಾಗಿರುವ ಪ್ರತಾಪ್ ನಗರ ಕೇವಾಡಿಯ ವಿಭಾಗ ಮತ್ತು ದಭೋಯ್, ಛಾಂದೋಡ್ ಮತ್ತು ಕೆವಾಡಿಯಾದ ನೂತನ ರೈಲು ನಿಲ್ದಾಣ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ.
ಕೇವಾಡಿಯಾ ನಿಲ್ದಾಣ ಹಸಿರು ಕಟ್ಟಡ ಪ್ರಮಾಣ ಪತ್ರ ಪಡೆದ ಭಾರತದ ಪ್ರಥಮ ರೈಲು ನಿಲ್ದಾಣವಾಗಿದೆ. ಈ ಯೋಜನೆ ನರ್ಮದಾ ತಟದ ಪ್ರಮುಖ ಧಾರ್ಮಿಕ ಮತ್ತು ಪುರಾತನ ಯಾತ್ರಾ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ದೇಶೀಯ ಮತ್ತು ವಿದೇಶೀ ಪ್ರವಾಸಿಗರ ಹೆಚ್ಚಿನ ಆಗಮನ ಹೆಚ್ಚಿಸುವುದರೊಂದಿಗೆ ಹತ್ತಿರದ ಬುಡಕಟ್ಟು ವಲಯಗಳ ಅಭಿವೃದ್ಧಿಗೂ ಇಂಬು ನೀಡಲಿದೆ.












Click it and Unblock the Notifications