ಮಗ ಎರಡನೇ ಬಾರಿ ಪ್ರಧಾನಿ, ಚಪ್ಪಾಳೆ ತಟ್ಟಿ ತಾಯಿಯ ಸಂಭ್ರಮ
ಅಹ್ಮದಾಬಾದ್, ಮೇ 30 : ತಮ್ಮ ಮಗ ಭಾರತದ ಪ್ರಧಾನಿಯಾಗಿ ಸತತ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದುದನ್ನು ನೋಡಿ 99 ವರ್ಷದ ಹೀರಾಬೆನ್ ಅವರು ಅಹ್ಮದಾಬಾದ್ ನಲ್ಲಿರುವ ನಿವಾಸದಲ್ಲಿಯೇ ಕುಳಿತುಕೊಂಡು ಟಿವಿಯಲ್ಲಿ ನೋಡಿ, ಚಪ್ಪಾಳೆ ತಟ್ಟಿ ಸಂತಸಪಟ್ಟಿದ್ದಾರೆ.
ಸದಾ ತನ್ನ ಮಗನ ಅಭ್ಯುದಯವನ್ನೇ ಬಯಸುವ, ತನ್ನ ಬಳಿ ಬಂದಾಗ ಮನತುಂಬಿ ಹರಸುವ, ಬಾಯಿಗೆ ಸಿಹಿ ಹಾಕಿ ಸಂತಸಪಡುವ ಈ ಮಹಾ ತಾಯಿಗೆ ಇದಕ್ಕಿಂತ ಖುಷಿಯಾಗುವಂಥ ಸಮಯ ಇನ್ನಾವುದಿದೆ? ಕುಳಿತಲ್ಲಿಂದಲೇ ತನ್ನ ಮಗ ದೇಶಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹರಸಿದ್ದಾರೆ.
ಮೇ 23ರಂದು ಫಲಿತಾಂಶ ಹೊರಬಿದ್ದು, ನರೇಂದ್ರ ಮೋದಿಯವರು ಅಭೂತಪೂರ್ವ ದಿಗ್ವಿಜಯ ಗಳಿಸಿದಾಗ, ತಾಯಿ ಹೀರಾ ಬೆನ್ ಅವರು ದೇಶದ ಜನರಿಗೆ ಧನ್ಯವಾದ ಅರ್ಪಿಸಿದ್ದರು. ಇಡೀ ಗುಜರಾತ್ ನಲ್ಲಿ ಹರ್ಷದ ಹೊನಲು ಹರಿದಿದ್ದರೆ, ಅವರ ಮನೆಯಲ್ಲಿಯೂ ಸಂಭ್ರಮ ಮನೆಮಾಡಿತ್ತು.

ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ತಾಯಿಯ ಆಶೀರ್ವಾದ ಪಡೆಯಲೆಂದು ಅಮ್ಮನ ಮನೆಗೆ ಹೋಗಿದ್ದಾಗ, ಅವರಿಗೆ ಸಿಹಿ ತಿನ್ನಿಸುವ ಸಂದರ್ಭದಲ್ಲಿ ಫೋಟೋಗ್ರಾಫರುಗಳು ಕರೆಸಿಕೊಂಡು ಮೋದಿಯವರು ತಾಯಿ ಪ್ರೀತಿಯ ನಾಟಕವಾಡುತ್ತಾರೆ ಎಂದು ಹಲವಾರು ಜನರು ವ್ಯಂಗ್ಯವಾಡಿದ್ದರು. ಅವರಿಗೆಲ್ಲ ದೇಶದ ಜನರೇ ಉತ್ತರ ನೀಡಿದ್ದಾರೆ.
ನರೇಂದ್ರ ಮೋದಿಯವರು ರಾಜಕೀಯಕ್ಕೆ ಧುಮುಕಿದ ಮೇಲೆ ತಮ್ಮ ಇಡೀ ಕುಟುಂಬದ ಜೊತೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಯಾರೊಂದಿಗೂ ಯಾವುದೇ ಸಂಬಂಧವನ್ನು ಉಳಿಸಿಕೊಂಡಿಲ್ಲ. ಆದರೆ, ಮೋದಿಯವರು ತಮ್ಮ ತಾಯಿಯವರನ್ನು ಆಗಾಗ ಭೇಟಿಯಾಗಿ, ಅವರ ಆರೋಗ್ಯವನ್ನು ವಿಚಾರಿಸುತ್ತಿರುತ್ತಾರೆ.












Click it and Unblock the Notifications