ಟಿ20 ವಿಶ್ವಕಪ್; ಫೈನಲ್ ಗೆ ಪ್ರವೇಶಿಸಿದ ಪಾಕಿಸ್ತಾನ
ನಾಟಿಂಗ್‌ಹ್ಯಾಮ್, ಜೂ.19: ಅತ್ಯುತ್ತಮ ಸಂಘಟಿತ ಪ್ರದರ್ಶನ ನೀಡುತ್ತಾ ಬಂದು ನಿರ್ಣಾಯಕ ಪಂದ್ಯವನ್ನು ಕೈಚೆಲ್ಲುವ ತನ್ನ 'ಚಾಳಿಯನ್ನು ' ಮುಂದುವರಿಸಿರುವ ದಕ್ಷಿಣಆಫ್ರಿಕಾ ಎರಡನೇ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ನಲ್ಲಿ ನಿನ್ನೆ ಪಾಕಿಸ್ತಾನಕ್ಕೆ 7 ರನ್ ಗಳಿಂದ ಶರಣಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಯೂನಿಸ್ ಖಾನ್ ಪಡೆ 20 ಓವರ್ ಗಳಲ್ಲಿ 149 ರನ್ ಗಳಿಸಿತು. ಪಾಕ್ ಪರವಾಗಿ ಕಮ್ರನ್ ಅಕ್ಮಲ್ 23, ಆಫ್ರಿದಿ 51, ಶೋಹೆಬ್ ಮಲಿಕ್ 34 ಮತ್ತು ಯೂನಿಸ್ ಖಾನ್ 24 ರನ್ ಗಳಿಸಿದರು. 150 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಗಿ 7 ರನ್ ಗಳಿಂದ ಸೋಲುಂಡಿತು.
ದಕ್ಷಿಣಆಫ್ರಿಕಾ ಪರ ಕಾಲಿಸ್ (64) ಮತ್ತು ಡುಮಿನಿ (44) ಮಾತ್ರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕ್ ಪರ ಆಫ್ರಿದಿ 2 ವಿಕೆಟ್ ಪಡೆದರು. ಆಲ್ ರೌಂಡರ್ ಆಟ ಪ್ರದರ್ಶಿಸಿದ ಆಫ್ರಿದಿ ಪಂದ್ಯಶ್ರೇಷ್ಟ ಪ್ರಶಸ್ತಿ ಗಳಿಸಿದರು.ಶುಕ್ರವಾರ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುವ ಎರಡನೇ ಸೆಮಿ ಫೈನಲ್ ವಿಜೇತರನ್ನು ಪಾಕಿಸ್ತಾನ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
(ದಟ್ಸ್ ಕ್ರೀಡಾವಾರ್ತೆ)












Click it and Unblock the Notifications