ಅಧ್ಯಾತ್ಮ ಗುರು ಅಸಾರಾಂ ಮೊದಲು ಏನಾಗಿದ್ದ ಗೊತ್ತಾ!?
ಅಜ್ಮೀರ್, ಸೆ. 5: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌಜನ್ಯವೆಸಗಿದ ಪ್ರಕರಣದಲ್ಲಿ ಪೊಲೀಸ್ ಲಾಕಪ್ ನಲ್ಲಿರುವ ಪ್ರಭಾವಿ/ ಪ್ರಸಿದ್ಧ ಅಧ್ಯಾತ್ಮ ಗುರು ಅಸಾರಾಂ ಬಾಪು (72) ಖ್ಯಾತಿಯ ಶನಿಯನ್ನು ಬೆನ್ನಿಗೇರಿಸಿಕೊಳ್ಳುವ ಮುನ್ನ ಏನಾಗಿದ್ದರು ಗೊತ್ತಾ?
ಆಗಲೂ ಶನಿಕಾಟಕ್ಕೆ ತುತ್ತಾದವರಂತೆ ಸಿಂಪಲ್ಲಾಗಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಒಂದು ಟಾಂಗಾ ಚಾಲೂ ಮಾಡಿಕೊಂಡಿರುತ್ತಿದ್ದರು. ಅಧ್ಯಾತ್ಮ ಗುರುವಾಗಿ ರೂಪಾಂತರಗೊಳ್ಳುವ ಮುನ್ನ ಬಾಪು ಎಂಬ ಅಸಾರಾಂ ಹೊಟ್ಟೆಪಾಡಿಗಾಗಿ ಟಾಂಗಾವಾಲಾ ಆಗಿ ಬೆವರು ಹರಿಸುತ್ತಿದ್ದರು. ಸುಮಾರು ಎರಡು ವರ್ಷ ಕುದುರೆಗಾಡಿ ಓಡಿಸಿ ಜೀವನ ರೂಪಿಸಿಕೊಂಡಿದ್ದರು. (ಚಿತ್ರಗಳು PTI)

ದೇವಮಾನವ ಅಸಾರಾಂ 'ಟಾಂಗಾವಾಲ ಅಸ್ಮಲ್' ಆಗಿದ್ದ
ಸ್ವಯಂ ಘೋಷಿತ ದೇವಮಾನವ ಆಗುವ ಮುನ್ನ ಬಾಪು ಎಂಬ ಅಸಾರಾಂ, ಯುವಕನಾಗಿದ್ದಾಗ 'ಟಾಂಗಾವಾಲ ಅಸ್ಮಲ್' ಎಂದೇ ಪರಿಚಿತರಾಗಿದ್ದರು. ಹೇಳಿಕೇಳಿ ಅಜ್ಮೀರ್ ಶರೀಫ್ ದರ್ಗಾ ಪ್ರವಾಸಿಗರು/ಭಕ್ತಾದಿಗಳಿಂದ ತುಂಬಿತುಳುಕುವ ನಗರ. ಸ್ಥಳೀಯ ರೈಲ್ವೆ ಸ್ಟೇಷನ್ ನಿಂದ ಒಂದೇ ಸಮನೆ ಪ್ರಯಾಣಿಕರು ಬರುತ್ತಿರುತ್ತಾರೆ.
ಅಂತಹವರನ್ನು ಬಾಪು ಎಂಬ ಅಸಾರಾಂ ತಮ್ಮ ಕುದುರೆ ಗಾಡಿಯಲ್ಲಿ ಕರೆದೊಯ್ಯುತ್ತಿದ್ದರು. ಆಗ ಬೇರೆ ಗಾಡಿಗಳಿಗಿಂತ ಭಿನ್ನವಾಗಿದ್ದ ಅಸ್ಮಲನ ಟಾಂಗಾ ವಿಶೇಷ ಕುಷನ್ ಸೀಟ್ ಹೊಂದಿತ್ತು. ಹೀಗಾಗಿ ಈ ಟಾಂಗಾ ಎಲ್ಲರನ್ನೂ ಸೆಳೆಯುತ್ತಿತ್ತು.

ಭಾರತ-ಪಾಕ್ ಇಬ್ಭಾಗವಾದ ನಂತರ ಪಾಕಿನಿಂದ ಓಡಿಬಂದ
ಭಾರತ-ಪಾಕ್ ವಿಭಜನೆಯ ನಂತರ ಅಸ್ಮಲ್ ತಂದೆ ತೌಮಲ್ ಹರ್ಪಲಾನಿ ಅವರು ಪಾಕಿಸ್ತಾನದ ಸಿಂಧ್ ನಿಂದ ಗುಜರಾತಿಗೆ ಬಂದರು. ಆಗ ಅಸ್ಮಲ್ ಗೆ ಇನ್ನೂ ಏಳು ವರ್ಷ. ಅವರದು ತುಂಬಾ ಬಡ ಕುಟುಂಬವಾಗಿತ್ತು.

ಟಾಂಗಾ ಓಡಿಸಿ ಜೀವನಕ್ಕೆ ನೆಲೆ ಕಂಡುಕೊಂಡ
ಅಜ್ಮೀರ್‌ಗೆ 1963ರಲ್ಲಿ ಅಸ್ಮಲ್ ಬರುವ ಮುಂಚೆ ಗುಜರಾತಿನ ನಾನಾ ಊರುಗಳಲ್ಲಿ ಹೊಟ್ಟೆಪಾಡಿಗಾಗಿ ತೋಚಿದ ಕೆಲಸಗಳನ್ನೆಲ್ಲ ಮಾಡಿದ್ದರು. ತಮ್ಮ ಬಂಧುಗಳ ನೆರವಿನಿಂದ ಅಜ್ಮೀರ್‌ಗೆ ಬಂದ ಅಸ್ಮಲ್ ಅಲ್ಲಿಯೇ ಟಾಂಗಾ ಓಡಿಸಿ ಜೀವನಕ್ಕೊಂದು ನೆಲೆ ಕಂಡುಕೊಂಡಿದ್ದ. 'ಉರುಸ್ ಸಂದರ್ಭದಲ್ಲಿ ಟಾಂಗಾ ರೇಸ್‌ನಲ್ಲೂ ಭಾಗವಹಿಸಿದ್ದ' ಎಂದು ಇಲ್ಲಿನ ಟಾಂಗಾ ಸಂಘದ ಪ್ರಧಾನ ಕಾರ್ಯದರ್ಶಿ ಹೀರಾ ಉಸ್ತಾದ್ (75) ನೆನಪಿಸಿಕೊಳ್ಳುತ್ತಾರೆ.

ಟಾಂಗಾವಾಲಾಗೆ ಶ್ರೀಮಂತನಾಗುವ ಆಸೆಯಿತ್ತು/ಹಸಿವಿತ್ತು
'ಆಮೇಲಾಮೇಲೆ ಯಾರೋ ಹೇಳಿದರು ಆ ಟಾಂಗಾವಾಲಾ ತಾನು ದೇವ ಮಾನವ ಎಂದು ಈಗ ಸ್ವಯಂಘೋಷಿಸಿಕೊಂಡು ಚಾಲ್ತಿಗೆ ಬಂದಿದ್ದಾನೆ ಎಂದು. ಆದರೆ ಅವನಲ್ಲಿ ದೇವಮಾನವ ಲಕ್ಷಣಗಳನ್ನು ನಾವು ಯಾವತ್ತೂ ಕಾಣಲಿಲ್ಲ. ಅವನಿಗೆ ಶ್ರೀಮಂತನಾಗಬೇಕು ಎಂಬ ಆಸೆಯಿತ್ತು/ಹಸಿವಿತ್ತು. ಮುಂದೆ ಮತ್ತೆ ಅಹಮದಾಬಾದಿಗೆ ವಾಪಸಾದ. ಇದೀಗ ಬಾಪು ಆಗಿ ಕಾಣಿಸಿಕೊಂಡಿದ್ದಾನೆ' ಎಂದು ಸ್ಥಳೀಯ ವಕೀಲರೊಬ್ಬರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಪ್ರತಿನಿಧಿ ಜತೆ ಟಾಂಗಾದಲ್ಲಿ ಪ್ರಯಾಣಿಸುತ್ತಾ ಮೆಲುಕು ಹಾಕಿದ್ದಾರೆ.












Click it and Unblock the Notifications