ಪತಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿದ ಪತ್ನಿ
ಬೀಜಿಂಗ್, ಸೆ. 3: ದಿನ ನಿತ್ಯ ಹಿಂಸೆ ನೀಡುತ್ತಿದ್ದ ಮಾದಕ ದ್ರವ್ಯ ವ್ಯಸನಿ ಪತಿಯನ್ನು ಹತ್ಯೆ ಮಾಡಿ ಶವವನ್ನು ಕುಕ್ಕರ್ ನಲ್ಲಿಟ್ಟು ಬೇಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಂಥದ್ದೊಂದು ಭಯಾನಕ ಕೃತ್ಯ ಎಸಗಿದ ಮಹಿಳೆ ಪೊಲೀಸರಿಗೆ ಶರಣಾಗಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಹತ್ಯೆಗೊಳಗಾದ ವ್ಯಕ್ತಿ ಮಾದಕ ದ್ರವ್ಯ ವ್ಯಸನಿಯಾಗಿದ್ದು ಪ್ರತಿನಿತ್ಯ ಪತ್ನಿಗೆ ಹಿಂಸೆ ನೀಡುತ್ತಿದ್ದ. ಪತಿಯ ಈ ಕಾಟದಿಂದ ರೋಸಿ ಹೋದ ಮಹಿಳೆ ಆತನನ್ನು ಹತ್ಯೆ ಮಾಡಿ ಶವವನ್ನು ಗರಗಸದಿಂದ ಮಾಂಸದ ತುಂಡುಗಳಾಗಿ ಕತ್ತರಿಸಿ, ಕುಕ್ಕರ್ ನಲ್ಲಿ ಬೇಯಿಸಿದ್ದಾಳೆ ಎಂದು ಚೀನಾ ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ್ದು ಏಕೆ?: ಅಂಹುವೈ ಪ್ರಾಂತ್ಯದ ಲೂಆನ್ ನಗರದಲ್ಲಿ ಪತ್ನಿ ತನ್ನ ಪತಿಯನ್ನು ಕೊಲ್ಲಲು ಕಾರಣವೇನು? ಎಂಬ ಪ್ರಶ್ನೆಯನ್ನು ಹುಡುಕ ಹೊರಟ ಪೊಲೀಸರಿಗೆ ಬೇರೆಯದೆ ಕಥೆ ಗೋಚರಿಸಿದೆ.
ಈ ದಂಪತಿಗೆ ಎರಡು ತಿಂಗಳ ಹೆಣ್ಣುಗೂಸೊಂದಿದೆ. ಆದರೆ, ಮೃತ ಪತಿಗೆ ಗಂಡು ಸಂತಾನದ ಮೇಲೆ ಭಾರಿ ಮೋಹ ಇತ್ತಂತೆ. ನಿತ್ಯ ಇದಕ್ಕಾಗಿ ಜಗಳ ವಾಡುತ್ತಿದ್ದನಂತೆ. ಮತ್ತೊಮ್ಮೆ ಪ್ರಯತ್ನಿಸೋಣ ಗಂಡು ಮಗು ಹುಟ್ಟಬಹುದು ಎಂದು ಪತ್ನಿಯನ್ನು ಕೇಳಿಕೊಂಡಿದ್ದಾನೆ. ಅದಕ್ಕೆ ಅವಳು ಸದ್ಯಕ್ಕೆ ಬೇಡ ಮಗು ಇನ್ನೂ ಚಿಕ್ಕದು ನಂತರ ನೋಡೋಣ ಎಂದಿದ್ದಾಳೆ.

ಮೊದಮೊದಲು ಇದಕ್ಕೆ ಒಪ್ಪಿದ್ದಂತೆ ಇದ್ದ ಪತಿ, ಇತ್ತೀಚೆಗೆ ಅವರಿವರ ಮಾತು ಕೇಳಿಸಿಕೊಳ್ಳುವುದನ್ನು ಹೆಚ್ಚು ಮಾಡಿಬಿಟ್ಟಿದ್ದ. ಮೂಢನಂಬಿಕೆ ದಾಸನಾಗಿ ಬೆಳೆಯತೊಡಗಿದ. ಯಾವುದೋ ಪಂಗಡದ ಗುರುವೊಬ್ಬ ಕೊಟ್ಟ ಸಲಹೆಯನ್ನು ತಲೆಯಲ್ಲಿ ತುಂಬಿಕೊಂಡು ಮನೆಗೆ ಬಂದ.
ಸುಖ ನಿದ್ರೆಯಲ್ಲಿದ್ದ ಹಸುಗೂಸಿನನ್ನು ಕಂಡು ನಕ್ಕು, ಬಟ್ಟೆ ಹೊಲೆಯುವ ಸೂಜಿ ತೆಗೆದು ಚುಚ್ಚಿಬಿಟ್ಟ. ಮಗು ಕಿಟಾರನೆ ಕಿರುಚಿಕೊಂಡರೂ ನಿಲ್ಲಿಸದೆ ತನ್ನ ಮೂಢ ನಂಬಿಕೆ ಪದ್ಧತಿ ಪ್ರಕಾರ ಅಂದುಕೊಂಡಷ್ಟು ಹೊತ್ತು ಚುಚ್ಚುತ್ತಲೇ ಇದ್ದ. ಈ ರೀತಿ ಚುಚ್ಚಿದರೆ ಮುಂದೆ ಗಂಡು ಮಗು ಹುಟ್ಟುತ್ತದೆ ಎಂದು ಯಾರೋ ಹೇಳಿದ್ದರಂತೆ.
ಪತಿಯ ಹುಚ್ಚಾಟ ಈ ರೀತಿ ಇದ್ದರೆ, ನಿತ್ಯ ಪತಿಯ ಕಾಟ ತಡೆಯಲಾರದೆ ಪತ್ನಿ ಕೂಡಾ ಮಾನಸಿಕ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ. ಮಹಿಳೆ ತೂಕ ಕಳೆದುಕೊಂಡು ನಿತ್ರಾಣಳಾಗಿದ್ದಳು. ಮನೆಯಿಂದ ಹೊರಗೆ ಹೋಗಿದ್ದ ಪತ್ನಿ ಮನೆಯಲ್ಲಿ ಗಂಡ ಮಾಡಿರುವ ಕೃತ್ಯ ಕಂಡು ಹೌಹಾರಿದ್ದಾಳೆ.
ಗಂಡನ ಮೇಲೆ ಮುಗಿಬಿದ್ದ ಪತ್ನಿ ಆತನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ಸತತ ಮೂರು ದಿನಗಳ ಕಾಲ ಅವನಿಗೆ ಚಿತ್ರ ಹಿಂಸೆ ನೀಡಿದ್ದಾಳೆ. ಅನ್ನ, ನೀರು ಆಹಾರಾದಿಗಳನ್ನು ನೀಡದೆ ಸತಾಯಿಸಿದ್ದಾಳೆ. ನಿತ್ರಾಣನಾಗಿದ್ದ ಪತಿಯನ್ನು ಹೊಡೆದು ಕೊಂದಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದೆ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಬೇಯಿಸಿರುವುದು ಕೂಡ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂಬುದಕ್ಕೆ ಉದಾಹರಣೆ. ಕೊಲೆಯನ್ನು ಮುಚ್ಚಿ ಹಾಕಲು ಯತ್ನಿಸಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ಅಂದ ಹಾಗೆ, ಮೃತಪಟ್ಟವಳು ಕೊಲೆಗಾರ್ತಿಯ ಎರಡನೇ ಪತಿಯಾಗಿದ್ದ.












Click it and Unblock the Notifications