ಪ್ರತಿಷ್ಠೆಯ ಕಾದಾಟ:ಸೊರಗುತ್ತಿರುವ ಲೋಕಾಯುಕ್ತ ಹುದ್ದೆ
ಅಹಮದಾಬಾದ್, ಸೆ 3: ನೂತನ ಲೋಕಾಯುಕ್ತ ನೇಮಕದ ವಿಚಾರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ಕಮಲಾ ಬೇನಿವಾಲ್ ನಡುವೆ ಪ್ರತಿಷ್ಠೆಯ ಕಾದಾಟ ಹೊಸ ತಿರುವು ಪಡೆದು ಕೊಂಡಿದೆ.
ಗುಜರಾತ್ ಲೋಕಾಯುಕ್ತ ಆಯೋಗ ಮಸೂದೆಯನ್ನು ಗುಜರಾತ್ ಅಸೆಂಬ್ಲಿ ಧ್ವನಿ ಮತದಿಂದ ಆಂಗೀಕರಿಸಿತ್ತು. ಆದರೆ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸಿ ಮಸೂದೆಯನ್ನು ಮತ್ತೆ ಪರಾಮರ್ಶಿಸುವಂತೆ ಮುಖ್ಯಮಂತ್ರಿ ಕಚೇರಿಗೆ ವಾಪಾಸ್ ಕಳುಹಿಸಿದ್ದಾರೆ.
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಪಾಲ ಭಾರದ್ವಾಜ್ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು, ಈಗ ಈ ಪಟ್ಟಿಗೆ ಗುಜರಾತ್ ರಾಜ್ಯ ಕೂಡಾ ಸೇರಿಕೊಂಡಿದೆ.
ಗುಜರಾತ್ ಅಸೆಂಬ್ಲಿ ಆಂಗೀಕರಿಸಿದ ಮಸೂದೆಯಲ್ಲಿ ರಾಜ್ಯಪಾಲರ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ. ಸಹಜವಾಗಿಯೇ ಇದರಿಂದ ಅಸಮಾಧಾನ ಗೊಂಡಿರುವ ರಾಜ್ಯಪಾಲ ಬೇನಿವಾಲ್ ಮಸೂದೆಗೆ ಅಂಕಿತ ಹಾಕದೇ, ಮೋದಿಗೆ ವಾಪಾಸ್ ಕಳುಹಿಸಿದ್ದಾರೆ.
ಏನಿದು ಮೋದಿ ಮತ್ತು ರಾಜ್ಯಪಾಲರ ನಡುವೆ ಮನಸ್ತಾಪ? ಸ್ಲೈಡಿನಲ್ಲಿ..

ಲೋಕಾಯುಕ್ತ ಹುದ್ದೆ
ಎಂಟು ವರ್ಷಗಳಿಂದ ಖಾಲಿ ಉಳಿದಿದ್ದ ಲೋಕಾಯುಕ್ತ ಹುದ್ದೆಗೆ ರಿಟೈರ್ಡ್ ನ್ಯಾಯಮೂರ್ತಿ ಆರ್ ಎ ಮೆಹ್ತಾ ಅವರನ್ನು 25.08.11ರಂದು ನೇಮಕ ಮಾಡಲಾಗಿತ್ತು. ನೂತನ ಲೋಕಾಯುಕ್ತರ ನೇಮಕದ ವಿಚಾರದಲ್ಲಿ ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಧಾರ ತೆಗೆದು ಕೊಂಡಿದ್ದರು. ಮುಖ್ಯಮಂತ್ರಿ ಮೋದಿ ಅವರನ್ನು ಕಡೆಗಣಿಸಿ ರಾಜ್ಯಪಾಲರು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು.

ಬಿಜೆಪಿ ವಿರೋಧಿ
ನೂತನವಾಗಿ ಆಯ್ಕೆಯಾದ ನ್ಯಾಯಮೂರ್ತಿ ಆರ್ ಎ ಮೆಹ್ತಾ ಬಿಜೆಪಿ ವಿರೋಧಿ. ಅವರ ಜೊತೆ ಗುರುತಿಸಿ ಕೊಂಡಿರುವ ಕೆಲ ಸರಕಾರೇತರ ಸಂಸ್ಥೆಗಳು ಗುಜರಾತಿನಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ದ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ವ್ಯವಸ್ಥಿತ ಪಿತೂರಿ ಎನ್ನುವುದು ಬಿಜೆಪಿಯ ವಾದ.

ಕಾನೂನು ಸಮರ
ಲೋಕಾಯುಕ್ತರ ನೇಮಕದ ವಿಚಾರದಲ್ಲಿ ಗುಜರಾತ್ ಕಾನೂನು ಸಮರ ಸಾರಿತ್ತು. ಆದರೆ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡರಲ್ಲೂ ಮೋದಿ ಸರಕಾರಕ್ಕೆ ಮುಖಭಂಗವಾಗಿತ್ತು.

ಗುಜರಾತ್ ಹೈಕೋರ್ಟ್
ಲೋಕಾಯುಕ್ತ ಹುದ್ದೆಗೆ ಬೇಕಾದ ಎಲ್ಲಾ ಗುಣಗಳು ನೂತನವಾಗಿ ನೇಮಕವಾಗಿರುವ ಲೋಕಾಯುಕ್ತರಿಗಿದೆ. ಅವರ ನೇಮಕವನ್ನು ವಿರೋಧಿಸುವುದು ಸರಿಯಲ್ಲ ಎಂದು ಮೋದಿ ಸರಕಾರಕ್ಕೆ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮುಖ್ಯೋಪಾಧ್ಯಾಯ ಶಿಫಾರಸು ಮಾಡಿದ್ದರು.

ಮೋದಿ ಮುಂದಿನ ತಂತ್ರ
ನ್ಯಾಯಾಂಗ ಹೋರಾಟದಲ್ಲಿ ಮುಖಭಂಗ ಅನುಭವಿಸಿದ ನಂತರ ಮೋದಿ, ಗುಜರಾತ್ ಲೋಕಾಯುಕ್ತ ಆಯೋಗವನ್ನು ರಚಿಸಿ ವಿಧಾನಸಭೆಯಲ್ಲಿ ಅದಕ್ಕೆ ಧ್ವನಿಮತದ ಆಂಗೀಕಾರ ಸಿಗುವಂತೆ ಮಾಡಿ ರಾಜ್ಯಪಾಲರಿಗೆ ಸಡ್ಡು ಹೊಡೆದರು. ಈಗ ರಾಜ್ಯಪಾಲರು ಮಸೂದೆಗೆ ಸಹಿ ಹಾಕದೇ ವಾಪಾಸ್ ಕಳುಹಿಸಿದ್ದಾರೆ.












Click it and Unblock the Notifications