ಬನ್ನಿ ಯಾದಗಿರಿಯ ಸೆಂಚುರಿ ಸ್ಟಾರ್ ಭೇಟಿ ಮಾಡಿ
ಯಾದಗಿರಿ, ಆ.25: ನೂರರ ಗಡಿ ದಾಟಿದ ಹಿರಿಯ ಅಜ್ಜಿ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಸ್ವತಃ ತಾನೇ ಮಾಡಿಕೊಳ್ಳುತ್ತಾ ತನ್ನ ಜೀವನದಲ್ಲಿ ಕೇವಲ ಒಂದು ಬಾರಿ ಆಸ್ಪತ್ರೆಗೆ ಭೇಟಿ ನೀಡಿರುವ ಅಜ್ಜಿಯ ಆರೋಗ್ಯ ಎಲ್ಲರಿಗೂ ಮಾದರಿ...! ಯಾರು ಈ ಅಜ್ಜಿ ಅಂತಿರಾ? ಮುಂದೆ ಓದಿ..
ಯಾದಗಿರಿ ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿರುವ ಈ ಅಜ್ಜಿಯ ಹೆಸರು ಖಾಸಿಂಬಿ, ಆಕೆಯ ವಯಸ್ಸು 122 ವರ್ಷ ಇಷ್ಟು ವಯಸ್ಸಾದರೂ ಸಹ ತನ್ನ ದಿನನಿತ್ಯದ ಚಟುವಟಿಕೆಗಳನ್ನು ತಾನೇ ಸ್ವತಃ ಮಾಡಿಕೊಳ್ಳುತ್ತಾಳೆ. ಬೆಳಗಾಯಿತೆಂದರೆ ಮನೆಯವರ ಕೈಲಿ ಚಹಾ ತರಿಸಿಕೊಂಡು ಸೇವಿಸುತ್ತಾಳೆ. ಮಧ್ಯಾನ್ಹ ಜೋಳದ ರೋಟ್ಟಿ, ಮಟನ್, ಚಿಕನ್ ಮತ್ತು ಮೀನು ಸಾರು ಸೇವಿಸುತ್ತಾಳೆ.
122 ವರ್ಷದ ಅಜ್ಜಿಯ ಹಲ್ಲುಗಳು ಇನ್ನೂ ಗಟ್ಟಿಯಾಗಿವೆ. ಈಕೆಗೆ 100 ವರ್ಷ ಆಗಿದ್ದಾಗ ಹೊಲಗದ್ದೆಗಳಲ್ಲಿ ವ್ಯವಸಾಯ ಮಾಡುತ್ತಿದ್ದಳಂತೆ ಆದರೆ ನೂರರ ಗಡಿ ನಂತರ ಹೊರಗಡೆ ಹೋಗುವುದಕ್ಕೆ ಆಗದೇ ಮನೆಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಈಗಲೂ ಹೊಲಗದ್ದೆಯಲ್ಲಿ ಕೆಲಸ ಮಾಡಲು ಮನಸ್ಸು ಹಾತೊರೆಯುತ್ತದೆ ಎನ್ನುತ್ತಾರೆ.

ಈ ಅಜ್ಜಿಗೆ 3 ಜನ ಮಕ್ಕಳಲ್ಲಿ ಇಬ್ಬರೂ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಈಗಿರುವ ಓರ್ವ ಮಗ ಅಬ್ಬಾಸ್ ಅಲಿ ತನ್ನ ತಾಯಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ. ಗಂಟೆಗೊಮ್ಮೆ ಅಜ್ಜಿ ತಂಬಾಕು ಜಿಗಿಯುವ ಅಭ್ಯಾಸವಿದೆ ಎನ್ನುವುದು ಮನೆಯವರ ಮಾತಾದರೂ, ಅಜ್ಜಿ ಮಾತ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿಲ್ಲ.
122 ವರ್ಷದ ಹಿರಿಯಜ್ಜಿಯ ಬಗ್ಗೆ ನಾಯ್ಕಲ್ ಗ್ರಾಮಸ್ಥರು ಹೆಮ್ಮೆ ಪಡುತ್ತಾರೆ. ಪ್ರತಿನಿತ್ಯ ತನ್ನ ಕಾರ್ಯ ಚಟುವಟಿಕೆಗಳನ್ನು ತಾನೇ ಮಾಡಿಕೊಂಡು ಸ್ವಾವಲಂಬಿಯಾಗಿದ್ದಾಳೆ. ವಯಸ್ಸಾಯಿತೆಂದರೆ ತಂದೆ, ತಾಯಿಂದಿರನ್ನು ಅಸಡ್ಡೆ ಮನೋಭಾವದಿಂದ ಕಾಣುವ ಮಕ್ಕಳಿರುತ್ತಾರೆ. ಆದರೆ, 67 ವರ್ಷದ ಬಗ ಅಬ್ಬಾಸ್ ಮತ್ತು ಸೋಸೆ ಅಷ್ಟೇ ಕಾಳಜಿಯಿಂದ ತಾಯಿಯ ಸೇವೆ ಮಾಡುತ್ತಿದ್ದಾರೆ.
ಇಳಿ ವಯಸ್ಸಿನಲ್ಲೂ ಎದುರುಗಡೆ ಯಾರೇ ಬಂದರೂ ಸ್ಪಷ್ಟವಾಗಿ ಗುರುತಿಸುವ ಅಜ್ಜಿಯು ಕನ್ನಡಕ ಮಾತ್ರ ಇದುವರೆಗೂ ಹಾಕಿಲ್ಲ. ಪ್ರತಿನಿತ್ಯ ಆಕೆಯ ಮನೆಗೆ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ ಗ್ರಾಮಸ್ಥರು. ಅತ್ಯಂತ ಹಿರಿಯ ಅಜ್ಜಿಯಂತೆ ಹೆಗ್ಗಳಿಕೆ ಪಾತ್ರವಾಗಿರುವ ಖಾಸಿಂಬಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಅದೆನೇ ಇರಲಿ 60-70 ವರ್ಷವಾದರೆ ಸಾಕೂ ಖಾಯಿಲೆಗಳಿಗೆ ತುತ್ತಾಗುತ್ತಿರುವ ಇಂದಿನ ಜನರಿಗೆ ಈ ಅಜ್ಜಿ ಮಾದರಿ ಎನ್ನಬಹುದು. ಕನ್ನಡಕವಿಲ್ಲದೇ ಎದುರು ಬಂದವರಿಗೆ ಸ್ಪಷ್ಟವಾಗಿ ಗುರುತಿಸುವ ಅಜ್ಜಿಯು ಇನ್ನಷ್ಟು ದಿನ ಬದುಕಲಿ ಅಂತಾ ಗ್ರಾಮಸ್ಥರು ಹಾರೈಸುತ್ತಿದ್ದಾರೆ.. ಈ ಅಜ್ಜಿಗೆ ನಾವೂ ಹಾರೈಸೋಣ ಆಲ್ ದಿ ಬೆಸ್ಟ್ ಅಜ್ಜಿ...












Click it and Unblock the Notifications