ನಾರ್ವೆ ಪ್ರಧಾನಿ ಟ್ಯಾಕ್ಸಿ ಡ್ರೈವರ್ ಆದಾಗ...
ನಾರ್ವೆ, ಆ.13: ನಾರ್ವೆ ದೇಶದ ಪ್ರಧಾನಿ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಅವರು ಮಾರುವೇಷದಲ್ಲಿ ನಗರ ಸಂಚಾರ ಮಾಡಿ ಸಂಚಲನ ಮೂಡಿಸಿದ್ದಾರೆ. ಟ್ಯಾಕ್ಸಿ ಡ್ರೈವರ್ ವೇಷ ಧರಿಸಿ ಸಾರ್ವಜನಿಕರ ಕಷ್ಟ ಸುಖ ಅರಿಯುವ ಯತ್ನ ಮಾಡಿರುವ ಘಟನೆ ನಡೆದಿದೆ.
ಜನ ನಮ್ಮ ಬಗ್ಗೆ ಏನು ತಿಳಿದಿದ್ದಾರೆ. ಅವರ ಬೇಡಿಕೆಗಳೇನು? ಕಷ್ಟ ಸುಖ ವಿಚಾರಣೆ ಮಾಡಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ, ಟ್ಯಾಕ್ಸಿಯಲ್ಲಿ ಓಡಾಡುತ್ತಾ ಜನರ ಸಮಸ್ಯೆಗಳನ್ನು ಆಲಿಸಿದ್ದು ಹೊಸ ಅನುಭವ ಎಂದು ನಾರ್ವೆ ಪ್ರಧಾನಿ ಜೆನ್ಸ್ ಹೇಳಿದ್ದು ಈಗ ಯೂಟ್ಯೂಬ್, ಫೇಸ್ ಬುಕ್, ಟ್ವೀಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ.

ಪ್ರಧಾನಿ ಜೆನ್ಸ್ ಅವರು ರಾಜಧಾನಿ ಓಸ್ಲೋ ನಗರದ ಟ್ಯಾಕ್ಸಿ ಸರ್ವೀಸ್ ನವರು ಧರಿಸುವಂತೆ ಸಮವಸ್ತ್ರ ಧರಿಸಿ, ಬ್ಯಾಡ್ಜ್ ಸಮೇತ ಕಪ್ಪು ಬಣ್ಣದ ಮರ್ಸಿಡೀಸ್ ಕಾರಿನಲ್ಲಿ ಸುತ್ತಾಡಿದ್ದಾರೆ. AFP ವರದಿಯಂತೆ ಕಾರಿನಲ್ಲಿ ಗುಪ್ತ ಕೆಮೆರಾ ಅಳವಡಿಸಲಾಗಿತ್ತು. ಹೀಗಾಗಿ ಟ್ಯಾಕ್ಸಿನಲ್ಲಿ ನಡೆದ ವಿದ್ಯಮಾನಗಳೆಲ್ಲವೂ ರೆಕಾರ್ಡ್ ಮಾಡಲಾಗಿದೆ.
ಪ್ರಯಾಣಿಕರಲ್ಲಿ ಹಲವರಿಗೆ ಟ್ಯಾಕ್ಸಿ ಚಾಲಕನ ವೇಷದಲ್ಲಿರುವುದು ನಮ್ಮ ಪ್ರಧಾನಿ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಕೆಲವರು ಮಾತ್ರ 'ನೀವು ಒಂದು ಕೋನದಿಂದ ನೋಡಿದರೆ ಪ್ರಧಾನಿ ಜೆನ್ಸ್ ರಂತೆ ಕಾಣುತ್ತಿರಿ' ಎಂದು ಕಾಮೆಂಟ್ ಮಾಡಿದ್ದಾರೆ. ಹೌದಾ ಎಂದು ನಕ್ಕು ಜೆನ್ಸ್ ಕಾರು ಚಲಾಯಿಸಿದ್ದಾರೆ.
ವಯೋವೃದ್ಧೆಯೊಬ್ಬರು ತಮ್ಮ ಉದ್ಯೋಗದಾತರ ನಮ್ಮ ಸಂಬಳದ ಹಣ ತಿನ್ನುತ್ತಿದ್ದಾನೆ ಏನಾದರೂ ಮಾಡಿ ಎಂದು ದುಃಖ ತೋಡಿಕೊಂಡಿದ್ದಾರೆ. ಟ್ಯಾಕ್ಸಿ ಚಾಲಕನಾಗಿ ಪ್ರಧಾನಿ ಜೆನ್ಸ್ ಅನುಭವದ ಬಗ್ಗೆ ಬರೆಯುತ್ತಾ ಸ್ಥಳೀಯ ಟ್ಯಾಬ್ಲಾಡ್ ಪ್ರಶ್ನೆಯೊಂದನ್ನು ಎಸೆದು ಬಿಟ್ಟಿದೆ.
ಮುಂದಿನ ಎಲೆಕ್ಷನ್ ಸೋತರೆ ನೀವು ಟ್ಯಾಕ್ಸಿ ಡ್ರೈವರ್ ಆಗಿ ಮುಂದುವರೆಯುತ್ತೀರಾ? ಎಂದು ಕೇಳಿದ್ದಾರೆ. 'ನಾನು ಪ್ರಧಾನಿಯಾದರೆ ದೇಶ ಹಾಗೂ ಟ್ಯಾಕ್ಸಿ ಪ್ರಯಾಣಿಕರು ಎಲ್ಲರನ್ನು ಒಳ್ಳೆ ಹಾದಿಯಲ್ಲಿ ಕರೆದೊಯ್ಯಬಲ್ಲೆ. ಟ್ಯಾಕ್ಸಿ ಚಾಲಕನಾಗಿರುವುದಕ್ಕಿಂತ ಪ್ರಧಾನಿಯಾಗಿ ಎಲ್ಲರನ್ನು ಕಾಯುವುದು ನನ್ನ ಕರ್ತವ್ಯ' ಎಂದು ಜೆನ್ಸ್ ಹೇಳಿದ್ದಾರೆ.
ಈ ಹಿಂದೆ ರಾಜರು ತಮ್ಮ ಪ್ರಜೆಗಳ ಕಷ್ಟ ಸುಖ ತಿಳಿಯಲು ಈ ರೀತಿ ಮಾರುವೇಷದಲ್ಲಿ ಜನನಿಬಿಡ ಸ್ಥಳಗಳಲ್ಲಿ ಸಂಚರಿಸಿ ವಿಷಯ ಸಂಗ್ರಹಿಸುತ್ತಿದ್ದರು ಎಂದು ಚರಿತ್ರೆ ಪಾಠಗಳಿಂದ ತಿಳಿದಿದ್ದೇವೆ. ಇತಿಹಾಸ ಮರುಕಳಿಸುತ್ತದೆ ಎಂದರೆ ಹೀಗೆ ಇರಬೇಕು. ಈ ರೀತಿ ಪ್ರಸಂಗ ನಮ್ಮಲ್ಲೂ ಸಾಧ್ಯವೇ ನಿಮ್ಮ ಊಹೆಗೆ ಬಿಟ್ಟಿದ್ದು.












Click it and Unblock the Notifications