ಕುಮಾರಸ್ವಾಮಿಗಿಂತ ಮತ್ತೆ ಅನಿತಾ ಹೆಚ್ಚು ಶ್ರೀಮಂತೆ
ಬೆಂಗಳೂರು, ಆಗಸ್ಟ್ 2: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನೇರಾನೇರ ಸ್ಪರ್ಧೆ ಎದುರಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಜೆಡಿಎಸ್ ಪಕ್ಷದ ಅನಿತಾ ಕುಮಾರಸ್ವಾಮಿ ಅವರು ತಮ್ಮ ಸ್ವವಿವರವಿರುವ ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ.
ಪ್ರತಿ ಚುನಾವಣೆಯಂತೆ ಈ ಬಾರಿಯೂ ತಮ್ಮ ಪತಿ ಕುಮಾರಸ್ವಾಮಿಗಿಂತ ತಾನೇ ಹೆಚ್ಚು ಸ್ಥಿತಿವಂತೆ ಎಂದು ಅನಿತಾ ಹೇಳಿಕೊಂಡಿದ್ದಾರೆ. ಕಸ್ತೂರಿ ಚಾನೆಲ್ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದಾರೆ. ಅಂದಹಾಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ದಂಪತಿ ತಮ್ಮಿಬ್ಬರ ಬಳಿ 123 ಕೋಟಿ ರೂ. ಇದೆ ಎಂದಿದ್ದರು.

ಅನಿತಾ ಕುಮಾಸ್ವಾಮಿ ಆಸ್ತಿ 116.5 ಕೋಟಿ ರೂ.
ಅಫಿಡವಿಟ್ ಪ್ರಕಾರ ಎಚ್ ಡಿ ಕುಮಾರಸ್ವಾಮಿಗಿಂತ ಅವರ ಪತ್ನಿ ಅನಿತಾ ಕುಮಾಸ್ವಾಮಿ ಶ್ರೀಮಂತೆ ಆಗಿದ್ದಾರೆ. ತಮ್ಮ ಬಳಿ 116.5 ಕೋಟಿ ರೂ. ಆಸ್ತಿ ಇದೆ ಎಂದು ಅನಿತಾ ಘೋಷಿಸಿಕೊಂಡಿದ್ದಾರೆ. ಅದೇ ತಮ್ಮ ಪತಿ ಕುಮಾರಸ್ವಾಮಿ ಬಳಿ ಕೇವಲ 19 ಕೋಟಿ ರೂ ಆಸ್ತಿಯಿದೆ ಎಂದೂ ಅವರು ನಮೂದಿಸಿದ್ದಾರೆ.

ಇಂಜಿನಿಯರಿಂಗ್ ಪದವೀಧರೆ ಅನಿತಾ
ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ಅನಿತಾ ಹೆಸರಿನಲ್ಲಿ ಯಾವುದೇ ವಾಹನವಿಲ್ಲ. ಭೂಮಿಯೂ ಇಲ್ಲ. 1300 ಗ್ರಾಂ ಚಿನ್ನ ಸೇರಿ ಒಟ್ಟು 49.27 ಲಕ್ಷ ರೂ ಮೌಲ್ಯದ ಚಿನ್ನಾಭರಣವಿರುವುದಾಗಿ ತಿಳಿಸಿದ್ದಾರೆ. ತಾವು 72 ಲಕ್ಷ ರೂ. ಹಾಗೂ ಪತಿ ಕುಮಾರಸ್ವಾಮಿ 1.23 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿರುವುದಾಗಿ ಅನಿತಾ ಮಾಹಿತಿ ನೀಡಿದ್ದಾರೆ.

ಡಿಕೆ ಸುರೇಶ್ ಆಸ್ತಿ 47 ಕೋಟಿ ರೂ.
ಇನ್ನು, ಕಾಂಗ್ರೆಸ್ಸಿನ ಡಿಕೆ ಸುರೇಶ್ ಅವರ ಬಳಿಯಿದೆ 47 ಕೋಟಿ ರೂ. ಆಸ್ತಿ. ಪಿಯುಸಿ ಓದಿಕೊಂಡಿದ್ದಾರೆ. 14.8 ಕೋಟಿ ರೂ ಚರಾಸ್ತಿ, 32.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಅವರು 17.70 ಕೋಟಿ ರೂ. ಸಾಲ ಹೊಂದಿದ್ದಾರೆ.

ಸುರೇಶ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ
23.45 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ನಾನಾ ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆಯಾದರೂ ಯಾವುದರಲ್ಲೂ ಇನ್ನೂ ಚಾರ್ಜ್ ಶೀಟ್ ಹಾಕಿಲ್ಲ ಎಂದೂ ಸುರೇಶ್ ನಮೂದಿಸಿದ್ದಾರೆ.












Click it and Unblock the Notifications