ಮಾನವೀಯತೆ ಮೆರೆದ ಬಿಎಂಟಿಸಿ ವೋಲ್ವೋ ಕಂಡಕ್ಟರ್
ಬೆಂಗಳೂರು, ಜು 30: ಆಟೋ ಮತ್ತು ಬಸ್ ನೌಕರರ ಪ್ರಾಮಾಣಿಕತೆಯ ಬಗ್ಗೆ ನಾವು ದಿನಾ ಓದುತ್ತಿರುತ್ತೇವೆ. ಮೋಸ, ವಂಚನೆಯ ಬಗ್ಗೆ ದಿನ ನಿತ್ಯ ಓದುವ ನಮಗೆ ಇಂಥಹಾ ಘಟನೆಗಳನ್ನು ನೋಡಿದಾಗ ಸತ್ಯ, ನಿಯತ್ತು ಅನ್ನೋದು ಕಲಿಯುಗದಲ್ಲಿ ಇನ್ನೂ ಬದುಕಿದೆ ಅನಿಸುವುದರಲ್ಲಿ ತಪ್ಪಿಲ್ಲ.
ಇಂಥಹ ಪ್ರಾಮಾಣಿಕತೆಯ ಘಟನೆಗೆ ಒನ್ ಇಂಡಿಯಾ ಓದುಗ ಗಣೇಶ್ ಎನ್ನುವವರು ಖುದ್ದು ಸಾಕ್ಷಿಯಾಗಿದ್ದಾರೆ. ಶನಿವಾರ ದಿನಾಂಕ ಜುಲೈ 27ರಂದು ಗಣೇಶ್ ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಐಟಿಪಿಎಲ್ ನಿಂದ ಬನಶಂಕರಿಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.
ಅದ್ಯಾವುದೋ ಜ್ಞಾನದಲ್ಲಿ ಗಣೇಶ್ 23 ಸಾವಿರ ಬೆಲೆಬಾಳುವ ಕ್ಯಾಮರಾವನ್ನು ಬಸ್ಸಿನಲ್ಲೇ ಬಿಟ್ಟು ಸಿಲ್ಕ್ ಬೋರ್ಡ್ ಸ್ಟಾಪಿನಲ್ಲಿ ಇಳಿದು ಫೋರಂ ಕಡೆ ಹೋದರು. ಅಲ್ಲಿ ಶಾಪಿಂಗ್ ಮಾಡುತ್ತಿರ ಬೇಕಾದರೆ ಕ್ಯಾಮರಾ ಬಸ್ಸಿನಲ್ಲೇ ಬಿಟ್ಟ ಬಗ್ಗೆ ಅರಿವಾಗಿದೆ. ಬೆಲೆಬಾಳುವ ಕ್ಯಾಮರಾ ಹೋಯಿತಲ್ಲಪ್ಪಾ ಎಂದು ತಲೆ ಮೇಲೆ ಕೈಹೊತ್ತು ಸ್ವಲ್ಪ ಹೊತ್ತು ಕೂತ ಗಣೇಶ್ ತನ್ನ ಸ್ನೇಹಿತನಿಗೆ ಫೋನ್ ವಗಾಯಿಸಿದ್ದಾರೆ.

(ಚಿತ್ರದಲ್ಲಿ ನಮ್ಮ ಓದುಗ ಗಣೇಶ್, ಡ್ರೈವರ್ ಸಯ್ಯದ್ ಖಾಸಿಂ, ಕಂಡಕ್ಟರ್ ಸುಲ್ತಾನ್ ಅಹಮದ್)
ಅವರ ಸ್ನೇಹಿತ ಟಿಕೆಟ್ ನಂಬರ್ ಆಧರಿಸಿ ಬಿಎಂಟಿಸಿ ಕಂಟ್ರೋಲ್ ರೂಂಮಿಗೆ ಕರೆ ಮಾಡಿ ಡ್ರೈವರ್ ಮತ್ತು ಕಂಡಕ್ಟರ್ ಮೊಬೈಲ್ ನಂಬರ್ ಪಡೆದುಕೊಂಡರು. ಸಂಜೆ ಹೊತ್ತಿಗೆ ಕಂಡಕ್ಟರ್ ಮತ್ತು ಡ್ರೈವರಿಗೆ ಕರೆ ಮಾಡಿದಾಗ ಗಣೇಶ್ ಗೆ ಆಶ್ಚರ್ಯ ಕಾದಿತ್ತು. ನಿಮ್ಮ ಕ್ಯಾಮರಾ ನಮ್ಮ ಬಳಿಯಿದೆ, ಅಪೋಲೋ ಆಸ್ಪತ್ರೆಯ ಬಳಿ ಬಂದು ತೆಗೆದುಕೊಳ್ಳಿ ಎನ್ನುವ ಉತ್ತರ ಕೊಟ್ಟಿದ್ದಾರೆ.
ಅಲ್ಲಿ ಗಣೇಶ್ ಗೆ ಕ್ಯಾಮರಾವನ್ನು ಕಂಡಕ್ಟರ್ ಹಿಂದಿರುಗಿಸಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಗಣೇಶ್ ಅವರಿಗೆ ಹಣ ನೀಡಲು ಹೋದಾಗ ಡ್ರೈವರ್ ಮತ್ತು ಕಂಡಕ್ಟರ್ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅಂದ ಹಾಗೆ ಬಸ್ಸಿನ ಡ್ರೈವರ್ ಹೆಸರು ಸಯ್ಯದ್ ಖಾಸಿಂ ಮತ್ತು ಕಂಡಕ್ಟರ್ ಹೆಸರು ಸುಲ್ತಾನ್ ಅಹಮದ್.
ಈ ಘಟನೆಯ ನಂತರ ಸುಲ್ತಾನ್ ಅಹಮದ್ ಅವರನ್ನು ನಮ್ಮ ವರದಿಗಾರ ಮಾತಾಡಿಸಿದಾಗ ಅವರು ಹೇಳಿದಿಷ್ಟು..
ಪ್ರ: ಸರ್..ನಿಮ್ಮ ಊರು?
ಸುಲ್ತಾನ್: ಬೀದರ್ ನಗರದಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಸಾರ್ಥೋಳಿ ಎನ್ನುವ ಹಳ್ಳಿ.
ಪ್ರ: ವೋಲ್ವೋ ಬಸ್ಸಿನಲ್ಲಿ ಹೆಚ್ಚಾಗಿ ಪ್ರಯಾಣಿಸುವುದು ಟೆಕ್ಕಿಗಳು. ಡ್ರೈವರ್ ಮತ್ತು ಕಂಡಕ್ಟರ್ ಜೊತೆ ಯಾವ ರೀತಿ ವರ್ತಿಸುತ್ತಾರೆ?
ಸುಲ್ತಾನ್: ಹೌದು, ಹೆಚ್ಚಾಗಿ ಇಂಜಿನಿಯರ್ ಗಳು ನಮ್ಮ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಹೆಚ್ಚಿನವರು ಸಹಕರಿಸುತ್ತಾರೆ. ಆದರೆ ಕೆಲವರು ವಿನಾಕಾರಣ ಜಗಳಕ್ಕೆ ಇಳಿಯುತ್ತಾರೆ. ಮುಖ್ಯವಾಗಿ ನಮಗೆ ಸಮಸ್ಯೆಯೆಂದರೆ ಚಿಲ್ಲರೆದ್ದು. ನೂರು,ಐನೂರು ರೂಪಾಯಿ ನೋಟು ಕೊಟ್ಟರೆ ನಮ್ಮಲ್ಲಿ ಚಿಲ್ಲರೆ ಇರುವುದಿಲ್ಲ. ಮುಂದಿನ ಸ್ಟೇಜ್ ಬರುವ ಮುನ್ನ ನಮಗೆ ಎಂಟ್ರಿ ಹಾಕ ಬೇಕಾಗಿರುತ್ತದೆ. ಅದು ಅವರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಪ್ರತಿನಿತ್ಯ ಏನಾದರೂ ಜಗಳವಾಗುವುದುಂಟು.
ಪ್ರ: ಅಂಥ ಸಮಯದಲ್ಲಿ ಏನು ಮಾಡುತ್ತೀರಾ?
ಸುಲ್ತಾನ್: ಅವರಿಗೆ ವಸ್ತು ಸ್ಥಿತಿಯನ್ನು ವಿವರಿಸುತ್ತೇವೆ. ಬಹಳಷ್ಟು ಬಾರಿ ಸಹ ಪ್ರಯಾಣಿಕರು ನಮ್ಮ ಸಹಾಯಕ್ಕೆ ಬರುತ್ತಾರೆ.
ಪ್ರ: ನಿಮ್ಮ ಬಸ್ಸಿನಲ್ಲಿ ಬರುವವರು ಹೆಚ್ಚಿನವರು ಕನ್ನಡ ಮಾತನಾಡುತ್ತಾರಾ?
ಸುಲ್ತಾನ್: ಹೆಚ್ಚಿನವರು ಮಾತನಾಡುವುದು ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿಯಲ್ಲಿ. ನಾವು ಅವರ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸುತ್ತೇವೆ. ಈಗೀಗ ತುಂಬಾ ಮಂದಿ ಬಸ್ಸಿನಲ್ಲಿ ಪ್ರಯಾಣಿಸಲು ಬೇಕಾಗುವಷ್ಟು ಕನ್ನಡವನ್ನು ಕಲಿತಿದ್ದಾರೆ.
ಪ್ರ: ಬಿಎಂಟಿಸಿ ಆಡಳಿತ ಮಂಡಳಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಿದೆಯಾ?
ಸುಲ್ತಾನ್: ಈ ಬಗ್ಗೆ ಏನೂ ಹೇಳೋಲ್ಲಾ ಸಾರ್..
ಪ್ರ: ಡೀಸೆಲ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರಾ?
ಸುಲ್ತಾನ್: ಹೌದು, ಈಗ ಸಂಸ್ಥೆ ಆಯೋಜಿಸುರುವ ಪೆಟ್ರೋಲ್ ಬಂಕಿನಲ್ಲಿ ಡೀಸೆಲ್ ಹಾಕಿಸಿ ಕೊಳ್ಳುತ್ತಿದ್ದೇವೆ. ದಿನಾ ತುಂಬಿಸಿ ಬಿಲ್ ಬಿಎಂಟಿಸಿ ಕಚೇರಿಗೆ ನೀಡುವ ಕೆಲಸ ತಪ್ಪಿದೆ.
ಪ್ರ: ಹೊಸ ಸಾರಿಗೆ ಸಚಿವರಿಂದ ಏನಾದರೂ ನಿರೀಕ್ಷೆ?
ಸುಲ್ತಾನ್: ಬೆಲೆಗಳು ಏರುತ್ತಿವೆ. ಕಷ್ಟಗಳನ್ನು ನಮ್ಮ ಕ್ಷೇಮಾಭಿವೃದ್ದಿ ಸಂಘದಲ್ಲಿ ತೋಡಿಕೊಂಡಿದ್ದೇವೆ. ನೋಡೋಣ ಅಲ್ಲಾ ಇದ್ದಾನೆ..
ನಮ್ಮ ಜೊತೆ ಮಾತನಾಡಿದ್ದಕ್ಕೆ ಧನ್ಯವಾದಗಳು, ನಿಮಗೆ ಮತ್ತು ಡ್ರೈವರ್ ಸಯ್ಯದ್ ಖಾಸಿಂ ಅವರಿಗೆ ಶುಭಾಶಯಗಳು.












Click it and Unblock the Notifications