ಸಂಪಿಗೆಹಳ್ಳಿ: ಪಕ್ಕದ್ಮನೆ ಅಂಕಲಿಂದ ಏಕಾಂಗಿ ಬಾಲಕಿ ರೇಪ್

ಚೊಕ್ಕನಹಳ್ಳಿ ಸಮೀಪ ಹೆಗಡೆ ನಗರ ನಿವಾಸಿ ಲಕ್ಷ್ಮಣ್ (40) ಬಂಧಿತ ಆರೋಪಿ. ಬಾಲಕಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಬುಧವಾರ ರಾತ್ರಿ 8.30ರಲ್ಲಿ ಆಕೆಯ ಮೇಲೆ ಲಕ್ಷ್ಮಣ್ ಬಲಾತ್ಕಾರ ಎಸಗಿದ್ದು, ಬಾಲಕಿಯ ತಾಯಿ ಮನೆಗೆ ಮರಳಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲ ವರ್ಷಗಳಿಂದ ಹೆಗಡೆ ನಗರದ ಮುಖ್ಯರಸ್ತೆಯ ಸಾಮಿಲ್‌ನಲ್ಲಿ ಆಂಧ್ರ ಮೂಲದ ಲಕ್ಷ್ಮಣ್ ಹಾಗೂ ಸಿಕ್ಕಿಂ ಮೂಲದ ಬಾಲಕಿಯ ತಂದೆ ಕೆಲಸಗಾರರಾಗಿ ಅದೇ ಮಿಲ್ ಸಮೀಪ ಶೆಡ್ ನಲ್ಲಿ ನೆಲೆಸಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಬಾಲಕಿ ಕುಟುಂಬಕ್ಕೆ ಲಕ್ಷ್ಮಣ್ ಪರಿಚಿತನಾಗಿದ್ದ. ಈ ಸ್ನೇಹದ ಹಿನ್ನೆಲೆಯಲ್ಲಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಬುಧವಾರ ಸಂಜೆ ಬಾಲಕಿಯ ತಾಯಿ, ದಿನಸಿ ತರಲು ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಪರಿಚಯದ ನೆಪದಲ್ಲಿ ಮನೆಗೆ ಬಂದ ಲಕ್ಷ್ಮಣ್, ಏಕಾಂಗಿಯಾಗಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ. ಮನೆಗೆ ಮರಳಿದ ಬಾಲಕಿ ತಾಯಿ, ಅಳುತ್ತಿದ್ದ ಮಗಳನ್ನು ವಿಚಾರಿಸಿದ್ದಾರೆ.
ಆಗ ಬಾಲಕಿ ತನ್ನ ಮೇಲೆ ಲಕ್ಷ್ಮಣ್ ಅಂಕಲ್ ನಡೆಸಿದ ಬಲಾತ್ಕಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಕೂಡಲೇ ಆಕೆಯ ಪೋಷಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿ ಹಾಗೂ ಬಾಲಕಿಯನ್ನು ಪ್ರತ್ಯೇಕವಾಗಿ ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಈ ಸಂಬಂಧ ವೈದ್ಯರು ನೀಡಿರುವ ಪ್ರಾಥಮಿಕ ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications