ಬೆಂಗಳೂರಲ್ಲಿ ಕುಡಿದು ವಾಹನ ಚಲಾಯಿಸೀರಿ ಎಚ್ಚರ!

ಕುಡಿದು ವಾಹನ ಓಡಿಸುವುದರಿಂದ ಸಂಭವಿಸುತ್ತಿರುವ ಅಪಘಾತ ಮತ್ತು ಸಾವಿನಿಂದ ಕುಟುಂಬಗಳು ಸರ್ವನಾಶವಾಗುತ್ತಿವೆ. ಇದು ನಿಲ್ಲಲೇಬೇಕು. ಕುಡಿದು ವಾಹನ ಓಡಿಸುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಘವೇಂದ್ರ ಔರಾದ್‌ಕರ್ ಅವರು ಸಂದೇಶ ರವಾನಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಸದಸ್ಯರೊಂದಿಗೆ ಬುಧವಾರ ಸಂಜೆ ಸಂವಾದ ನಡೆಸಿದ ಔರಾದಕರ್ ಅವರು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಮ್ಯೂನಿಟಿ ಪೊಲೀಸಿಂಗ್ (ಸಾರ್ವಜನಿಕರ ಪಾಲ್ಗೊಳ್ಳುವಿಕೆ) ವ್ಯವಸ್ಥೆಯನ್ನು ಜಾರಿಗೆ ತರಲು ಯತ್ನಿಸುವುದಾಗಿ ನುಡಿದರು.
ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಲು ಕಮಿಷನರ್ ಹಾಕಿಕೊಂಡಿರುವ ಯೋಜನೆಗಳು ಹೀಗಿವೆ : ಜನಶಕ್ತಿಯನ್ನು ಒಗ್ಗೂಡಿಸುವುದು, ತಂತ್ರಜ್ಞಾನಯನ್ನು ಸಮರ್ಥವಾಗಿ ಬಳಸಿಕೊಂಡು ಪೊಲೀಸುದಾರಿಕೆ ನಡೆಸುವುದು, ಸಾರ್ವಜನಿಕರಿಗೆ ಈ ಕುರಿತು ಸೂಕ್ತ ತರಬೇತಿ ನೀಡುವುದು.
ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇನ್ನಷ್ಟು ಉತ್ತಮಪಡಿಸುವ ಭರವಸೆಯನ್ನು ನೀಡಿದ ಅವರು, ಎಲ್ಲ ಯೋಜನೆಗಳನ್ನು ಜಾರಿಗೆ ತರಲು ಎಲ್ಲ ಹಿರಿಯ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಪತ್ರ ಬರೆಯಲಾಗಿದ್ದು, ನಿಯಮಿತವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಲು ಆದೇಶಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಟ್ರಾಫಿಕ್ ಆಯುಕ್ತ ದಯಾನಂದ್ ಅವರು, ನಗರದಲ್ಲಿ ಬಸ್ ನಿಲ್ದಾಣದ ಬಳಿಯೇ 140 ಸಿಗ್ನಲ್ ಗಳಿದ್ದು, ಅವನ್ನು ಸ್ಥಳಾಂತರಿಸಿ ವಾಹನ ಸಂಚಾರವನ್ನು ಸುಗಮಗೊಳಿಸಲು ಯೋಜನೆ ರೂಪಿಸುತ್ತಿದ್ದೇವೆ. ಜೊತೆಗೆ, ನಗರದಲ್ಲಿ ಒಟ್ಟು 16 ಸಾವಿರ ರಸ್ತೆಗುಂಡಿಗಳನ್ನು ಗುರುತಿಸಲಾಗಿದ್ದು, ಅವನ್ನು ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ ಎಂದು ದಯಾನಂದ್ ಅವರು ನುಡಿದರು.
ಮಂಗಳವಾರ ಹೊಸೂರು ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ನಾಲ್ವರು ಜನರ ಸಾವಿಗೆ ಮಾಜಿ ನಗರಸಭಾಧ್ಯಕ್ಷ ಕೃಷ್ಣಪ್ಪ ಅವರು ಕಾರಣರಾಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಪಘಾತದ ನಂತರ ಪರಾರಿಯಾಗಿದ್ದ ಕೃಷ್ಣಪ್ಪ ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ.


Click it and Unblock the Notifications
