ಭಯಾನಕ ಅನುಭವ ಹಂಚಿಕೊಂಡ ಆಫ್ರಿಕಾದ ತಿಮೋತಿ

ಕುಡಿದ ಮತ್ತಿನಲ್ಲಿದ್ದ ಡಜನ್ ಯುವಕರು ಬಾಬುಸಾಪಾಳ್ಯದಲ್ಲಿ ಚರ್ಚಿನಿಂದ ಮರಳುತ್ತಿದ್ದಾಗ ತಿಮೋತಿಯನ್ನು ಕೆಣಕಿ, ಜಾತಿ ನಿಂದನೆ ಮಾಡಿ, ಬೆನ್ನತ್ತಿ ಮನಬಂದಂತೆ ಥಳಿಸಿದ್ದಾರೆ. ಅವರು ತಪ್ಪಿಸಿಕೊಳ್ಳಲು ಓಡಿದರೂ ಬಿಡದೆ ಬೆನ್ನತ್ತಿ ಥಳಿಸಿದ್ದಾರೆ. ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದರೂ ಬಿಡದೆ ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ಹಲವಾರು ಜನರು ನೋಡುತ್ತಿದ್ದರೂ ತಡೆಯಲು ಬರಲಿಲ್ಲ ಎಂದು ಅವರು ನೋವನ್ನು ಹೊರಗೆಡಹಿದ್ದಾರೆ.
"ಅವರು, 'ಹೇ ನೀಗ್ರೋ' ಎಂದು ಕರೆದರು. ಹಾಗೇಕೆ ಕರಿತೀರಿ ಎಂದು ಕೇಳಿದಾಗ, 'ಇದು ನಿಮ್ಮ ಆಫ್ರಿಕಾ ಅಲ್ಲ, ಇದು ಭಾರತ, ನೀನೊಬ್ಬ ವಿದೇಶಿ, ದೇಶ ಬಿಟ್ಟು ತೊಗಲು' ಎಂದು ಜರಿದರು. ಅವರ ಮಾತನ್ನು ವಿರೋಧಿಸಿದಾಗ ಬೆನ್ನತ್ತಿ ಬಂದರು, ಜೇನು ಸುತ್ತಿಕೊಂಡಂತೆ ಸುತ್ತುವರಿದು ಮನಬಂದಂತೆ ಥಳಿಸಿದರು" ಎಂದು ಅವರು ಹೇಳಿಕೆ ನೀಡಿದ್ದಾರೆ.
"ನನಗೆ ತೀವ್ರ ಪೆಟ್ಟುಬಿದ್ದಾಗ, ಯಾರೂ ರಕ್ಷಣೆಗೆ ಬರಲಿಲ್ಲ. ಸಹಾಯಕ್ಕೆ ಗೋಗರೆದಾಗ ಸುತ್ತಲಿದ್ದವರು ತಮ್ಮ ಅಂಗಡಿಗಳನ್ನು ಮುಚ್ಚಲು ಶುರುಮಾಡಿದರು. ಪ್ರತಿದಿನ ಅವರ ಅಂಗಡಿಗೆ ನಾವು ಹೋಗುತ್ತೇವೆ. ಆಗ ಅವರಿಗೆ ನಾವು ಬೇಕಾದವರಾಗಿರುತ್ತೇವೆ. ಆದರೆ, ಇಂಥ ಪರಿಸ್ಥಿತಿಯಲ್ಲಿ ಅವರಿಗೆ ನಾನು ಬೇಡದವನಾಗಿದ್ದೆ" ಎಂದು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ತಿಮೋತಿ ನೋವು ತೋಡಿಕೊಂಡಿದ್ದಾರೆ.
ಆಫ್ರಿಕಾದ ಚಾಂದ್ ನಾಗರಿಕರಾಗಿರುವ ತಿಮೋತಿ ಅವರ ತಲೆಗೆ ತೀವ್ರ ಪೆಟ್ಟುಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮೊದಲಿನ ಸ್ಥಿತಿಗೆ ಬರಬೇಕಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ದೇಹದ ಮೇಲಾಗಿರುವ ಗಾಯಕ್ಕಿಂತ, ಜನರು ಹಿಂಜರಿದಾಗ ಮನಸ್ಸಿಗೆ ಆಗಿರುವ ಗಾಯ ಹೆಚ್ಚು ಘಾಸಿ ಮಾಡುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ತಿಮೋತಿ ಅವರು ಭಾರತೀಯಳನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಅವರು ಈಗ ತಮ್ಮ ಮೇಲಾಗಿರುವ ಹಲ್ಲೆಯಿಂದಾಗಿ ಭಾರತವನ್ನು ಬೇರೆಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 4 ಸಾವಿರ ಆಫ್ರಿಕಾದ ನಾಗರಿಕರು ವಾಸಿಸುತ್ತಿದ್ದಾರೆ. ಹಲ್ಲೆ ಮಾಡಿದ ಹನ್ನೆರಡು ಜನರಲ್ಲಿ ಇಬ್ಬರನ್ನು ಮಾತ್ರ ಬಂಧಿಸಲಾಗಿದ್ದು, ಉಳಿದವರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.


Click it and Unblock the Notifications
