ಇಬ್ಬರು ಅಧಿಕಾರಿಗಳ ಅಕ್ರಮ ಆಸ್ತಿ: 4.46 ಕೋಟಿ ವಶ

ನಾವ್ಡಾದ ಗ್ರಾಮೀಣಾಭಿವೃದ್ಧಿ ಇಲಾಖೆಯ ಇಂಜಿನಿಯರ್ ರಾಮಚಂದ್ರ ಗುಪ್ತಾ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 2.17 ಕೋಟಿ ರೂ ಮೊತ್ತದ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಿವಾನ್ ಜಿಲ್ಲಾ ಶಿಕ್ಷಣಾಧಿಕಾರಿ ರಾಧಾ ಕೃಷ್ಣ ಸಿಂಗ್ ಯಾದವ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. 2.28 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರುಗಳು, ಚಿನ್ನಾಭರಣ, ಭೂ ಮತ್ತು ಮನೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ಹೇಳಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಇವರೀರ್ವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದ ಇಂತಹುದೇ ದಾಳಿಗಳಲ್ಲಿ ನಾಲ್ಕು ಉನ್ನತಾಧಿಕಾರಿಗಳ ನಿವಾಸಗಳಿಂದ ಪೊಲೀಸರು 30 ಕೋಟಿ ರೂ ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದರು.
ಕರೋಡ್ ಪತಿ ಪೇದೆಗಳು : ಬಿಹಾರದಲ್ಲಿ ಭ್ರಷ್ಟಾಚಾರ ಎಂಬುದು ಎಲ್ಲೆ ಮೀರಿದೆ. ಅಲ್ಲಿ ಕೋಟ್ಯಧಿಪತಿ ಪೊಲೀಸ್ ಪೇದೆಗಳಿದ್ದಾರೆ. ಒಬ್ಬ ಪೊಲೀಸಪ್ಪ ಅಂತೂ ಸಿನಿಮಾ ಥಿಯೇಟರ್, ಹೋಟೆಲ್ ಸೇರಿದಂತೆ ಅಪಾರ ಅಕ್ರಮ ಆಸ್ತಿ ಹೊಂದಿದ್ದಾನೆ.
ಇತ್ತೀಚೆಗಷ್ಟೇ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಹೊಂದಿದ ಮೊಹಮದ್ ಯೂನಸ್ ಬಳಿ 50 ಕೋಟಿ ರೂ. ಅಕ್ರಮ ಆಸ್ತಿಯಿರುವುದನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಇವನ ಬಳಿಯೂ ಥಿಯೇಟರ್, ಹೋಟೆಲ್, ಕಾಲೇಜುಗಳು, ಬಂಗ್ಲೆಗಳು, 34 ವಾಹನಗಳು ಇದ್ದವು (PTI).












Click it and Unblock the Notifications