ರೇಪ್: ಗೂಂಡಾ ಕಾಯಿದೆ ಅನ್ವಯ ಸಾಧ್ಯವಿಲ್ಲ- ಕೋರ್ಟ್

ಗಮನಾರ್ಹವೆಂದರೆ ರೇಪಿಸ್ಟುಗಳ ವಿರುದ್ಧ ಗೂಂಡಾ ಕಾಯಿದೆ ಕಾನೂನು ಅಸ್ತ್ರ ಝಳಪಿಸಲು ಸಾಧ್ಯವಿಲ್ಲ ಎಂಬ ಕನಿಷ್ಠ ಅರಿವೂ ಇಲ್ಲದೆ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಗೃಹ ಸಚಿವರಾಗಿದ್ದವರು ರೇಪ್ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಗೂಂಡಾ ಕಾಯಿದೆಯಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ವೀರಾವೇಶದಿಂದ ಮಾತನಾಡಿದ್ದರು.
ಪ್ರಸ್ತುತ, ಶರಣ್ ದೇಸಾಯಿ ಎಂಬುವವರು ಸಲ್ಲಿಸಿದ್ದ PIL ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಎಚ್ ವಘೇಲಾ ಮತ್ತು ನ್ಯಾ ಬಿ ನಾಗರತ್ನ ಅವರ ವಿಭಾಗೀಯ ಪೀಠ ಬುಧವಾರ ಈ ಆದೇಶ ಮಾಡಿದೆ.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ಕಾನೂನುಗಳಿವೆ. ಅದರ ಅನ್ವಯ ಅತ್ಯಾಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ, ಗೂಂಡಾ ಕಾಯಿದೆ ಬಳಕೆಯಾಗುವುದು ಸಂಘಟಿತ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ವ್ಯಕ್ತಿಗಳನ್ನು ಮಂಜಾಗ್ರತ ಕ್ರಮವಾಗಿ ಬಂಧಿಸಲು ಮಾತ್ರ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ದಾಖಲಾರ್ಹ ಸಂಗತಿಯೆಂದರೆ ಈ ಹಿಂದೆ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ (2012 ಅಕ್ಟೋಬರ್) ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಲಾಗಿದೆ. ಆದರೆ ಆರೋಪಿಗಳು ರೇಪಿಸ್ಟುಗಳು ಎಂದಲ್ಲ ಬದಲಿಗೆ ಗಂಧದ ಕಳ್ಳಸಾಗಣೆ, ಡಕಾಯಿತಿ, ಹಲ್ಲೆ ಪ್ರಕರಣಗಳನ್ನು ದಾಖಲಿಸಿ, ಅವರ ವಿರುದ್ಧ ಗೂಂಡಾ ಕಾಯಿದೆ ಅನ್ವಯಗೊಳಿಸಲಾಗಿದೆ.












Click it and Unblock the Notifications