ಬೆಂಗಳೂರು ಜನರೇ ಎಚ್ಚರ ಡೆಂಗ್ಯೂ ಜ್ವರ ಹಬ್ಬುತ್ತಿದೆ

ಬುಧವಾರ ಆರೋಗ್ಯ ಇಲಾಖೆ ಆಯಕ್ತ ವಿ.ಬಿ.ಪಾಟೀಲ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ, ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಹಬ್ಬುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ.
ಕೇವಲ ಎರಡು ವಾರಗಳ ಅವಧಿಯಲ್ಲಿ ನಗರದಲ್ಲಿ ಹೊಸದಾಗಿ 93 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಮೂರು ತಿಂಗಳಿನಲ್ಲಿ 348 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ 233 ಜನರಿಗೆ ಡೆಂಗ್ಯೂ ಇರುವುದು ಖಚಿತವಾಗಿದೆ.
ಮಾಹಿತಿ ಅಭಿಯಾನ ಪ್ರಾರಂಭ : ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಿಬಿಎಂಪಿ ಆರೋಗ್ಯ ಘಟಕ, ಜನಜಾಗೃತಿ ಅಭಿಯಾನ ನಡೆಸಲು ಮುಂದಾಗಿದೆ. ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ, ಡೆಂಗ್ಯೂ ಬರದಂತೆ ತಡೆಗಟ್ಟುವ ಕುರಿತು ಮಾಹಿತಿ ನೀಡಲಿದ್ದಾರೆ.
ವಿ.ಬಿ.ಪಾಟೀಲ್ ಅವರು ಹೇಳುವಂತೆ, ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾದರೆ, ಮಾಹಿತಿ ದೊರೆಯುತ್ತಿಲ್ಲ. ಆದ್ದರಿಂದ, ಕೇಂದ್ರ ಆರೋಗ್ಯ ಸಚಿವಾಲಯ ಖಾಸಗಿ ಆಸ್ಪತ್ರೆಗಳಿಗೆ ಅನ್ವಯವಾಗುವ ಮಾರ್ಗಸೂಚಿ ಹೊರಡಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ಈ ಮಾರ್ಗಸೂಚಿಯನ್ನು ಕಳುಹಿಸಿದ್ದು, ಅಲ್ಲಿಯೂ ಡೆಂಗ್ಯೂ ಪ್ರಕರಣಗಳು ದಾಖಲಾದರೆ, ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿಯಲ್ಲಿನ, ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಪ್ರಕರಣಗಳು ದಾಖಲಾದರೆ, ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ, ಪಾಟೀಲ್ ಮನವಿ ಮಾಡಿದರು. ಡೆಂಗ್ಯೂ ಪ್ರಕರಣಗಳ ರಕ್ತದ ಪರೀಕ್ಷೆ ನಡೆಸಲು ಪ್ರತ್ಯೇಕ ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಆದೇಶ ನೀಡಿದರು.
ರಾಜ್ಯದಲ್ಲಿ ಜನವರಿಯಿಂದ 9,123 ಶಂಕಿತ ಡೆಂಗ್ಯೂ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 2,062 ಡೆಂಗ್ಯೂ ಪ್ರಕರಣಗಳು ಎಂದು ಖಚಿತವಾಗಿದೆ. ಹೆಚ್ಚಿನ ಡೆಂಗ್ಯೂ ಪ್ರಕರಣಗಳು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ದಾಖಲಾಗುತ್ತಿವೆ ಎಂದು ಪಾಟೀಲ್ ಹೇಳಿದರು.












Click it and Unblock the Notifications