'ಟೈಲರ್ ಮೇಡ್' ನರೇಂದ್ರ ಮೋದಿಯ ಬಗ್ಗೆ ಗೊತ್ತಾ?
ಅಹಮದಾಬಾದ್, ಜೂನ್ 28: ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿ ಇದ್ದಾರಲ್ಲಾ, ಇವರು ಸಾಮಾನ್ಯರಲ್ಲ. ವೇಶಭೂಷಣದಿಂದ ಹಿಡಿದು ಪ್ರತಿಯೊಂದರಲ್ಲೂ ಎಚ್ಚರ/ಕಾಳಜಿ ವಹಿಸಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ. ಇದು ಅವರಿಗೆ ವಿಶೇಷ ವರ್ಚಸ್ಸನ್ನೂ ತಂದುಕೊಟ್ಟಿದೆ.
ಕಾಟನ್ ಮೆಟೀರಿಯಲ್ ನಲ್ಲಿ ಸಿದ್ಧಪಡಿಸಲಾದ ಅರ್ಧ ತೋಳಿನ ಕುರ್ತಾ ಮತ್ತು ಟೈಟ್ ಫಿಟ್ಟಿಂಗ್ ಇರುವ ಚೂಡಿದಾರ್ ಅಂದರೆ ಮೋದಿಗೆ ತುಂಬಾ ಇಷ್ಟ. ಇತ್ತೀಚಿನ ದಿನಗಳಲ್ಲಿ ಇದೇ ಮೋದಿಯ ಹೆಗ್ಗುರುತು ಆಗಿದೆ. ಮೋದಿಯ ಖಾಸಗಿ ಟೈಲರ್ ಚೌಹಾಣ್ ಹೇಳುವಂತೆ ಜನರ ಮಧ್ಯೆ ಎದ್ದುಕಾಣಲು ಮೋದಿ ತಮ್ಮ ಉಡುಪಿನತ್ತ ವಿಶೇಷ ಗಮನಹರಿಸುತ್ತಾರಂತೆ.

ಆರೆಸ್ಸೆಸ್ ಪ್ರಚಾರಕರಾಗಿದ್ದ ದಿನದಿಂದಲೂ
ನರೇಂದ್ರ ಮೋದಿ ಆರೆಸ್ಸೆಸ್ ಪ್ರಚಾರಕರಾಗಿದ್ದ ದಿನದಿಂದಲೂ (1990ರ ದಶಕದ ಆರಂಭದಲ್ಲಿ) ಬಿಪಿನ್ ಚೌಹಾಣ್ ಗೆ ಗೊತ್ತಂತೆ. ಚೌಹಾಣ್ ರ ಚಿಕ್ಕ ಟೈಲರ್ ಅಂಗಡಿಗೆ ಹೋಗಿ ಮೋದಿ ಅಳತೆ ಕೊಟ್ಟು ಬರುತ್ತಿದ್ದರಂತೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ವರ್ಷದಲ್ಲಿ ಒಂದೆರಡು ದಿನ ಮೋದಿ ಜತೆ ಕಾಲ ಕಳೆಯುವ ಚೌಹಾಣ್ ಆ ಸಂದರ್ಭಗಳಲ್ಲಿ ಮೋದಿ ತಕ್ಕನಾದಂತಹ ಬಟ್ಟೆ ಹೊಲೆಯಲು ಅವರ ಅಳತೆಯನ್ನು ತೆಗೆದುಕೊಳ್ಳುತ್ತಾರಂತೆ.

ಮೋದಿಯ ಪರಮಾಪ್ತ ಟೈಲರ್ ಫ್ರೆಂಡ್
ಇಷ್ಟಕ್ಕೂ ಮೋದಿ ದಿರಿಸಿನ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿಕೊಳ್ಳುವ ಆಸಾಮಿ ಯಾರಪ್ಪಾ ಅಂದರೆ ಮೋದಿಯ ಪರಮಾಪ್ತ ಟೈಲರ್ ಫ್ರೆಂಡ್ ಬಿಪಿನ್ ಚೌಹಾಣ್. ಅಹಮದಾಬಾದಿನ ಹೊರವಲಯದಲ್ಲಿ ಅವರೀಗ ಸ್ವಂತದ್ದೊಂದು ದೊಡ್ಡ ಮಳಿಗೆ ಹೊಂದಿದ್ದಾರಂತೆ.

150 ಕೋಟಿ ರೂ ವಹಿವಾಟಿನ Jade Blue
50 ವರ್ಷದ ಬಿಪಿನ್ ಚೌಹಾಣ್ ಅವರು ಬರೀ ಟೈಲರ್ ಆಗಿ ಉಳಿದಿಲ್ಲ. Jade Blue ಎಂಬ ಪ್ರಸಿದ್ಧ ಜವಳಿ ಮಳಿಗೆ ಮಾಲೀಕರು. Jade Blue ಇಂದು 150 ಕೋಟಿ ರೂ. ವಹಿವಾಟು ನಡೆಸುತ್ತಿದೆ. 1981ರಲ್ಲಿ ಸ್ವಂತದ್ದಾದ ಟೈಲರ್ ಅಂಡಗಿಯಿಟ್ಟುಕೊಳ್ಳುವ ಮುನ್ನ ಬಿಪಿನ್ ಚೌಹಾಣ್ ರಸ್ತೆ ಬದಿಯಲ್ಲಿ ಕಾಚಾ-ಗುಂಡಿ ಹಾಕುತ್ತಿದ್ದರಂತೆ.

ಮತ್ತೊಬ್ಬ ಗುಜರಾತಿ ಅಹ್ಮದ್ ಪಟೇಲರಿಗೂ ಇಷ್ಟವಂತೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ, ಮತ್ತೊಬ್ಬ ಗುಜರಾತಿ ಅಹ್ಮದ್ ಪಟೇಲ್, ಉದ್ಯಮಿ ಗೌತಮ್ ಅದಾನಿ ಮುಂತಾದವರು ಬಿಪಿನ್ ಚೌಹಾಣ್ ಅವರ ರೆಗ್ಯುಲರ್ ಕಸ್ಟಮರುಗಳು.

ಅತ್ಯಾಪ್ತರಿಂದ ಬಟ್ಟೆ ಕಾಣಿಕೆ
ಮೋದಿಗೆ ಬಟ್ಟೆ ಶೋಕಿ ಇರುವುದನ್ನು ತಿಳಿದ ಅವರ ಅತ್ಯಾಪ್ತರು ಅವರಿಗೆ ವಿಶೇಷ ಬಟ್ಟೆ ಕಾಣಿಕೆ ಕೊಡುತ್ತಾರಂತೆ. ಮೋದಿ ಅವುಗಳಿಂದಲೇ ತಮ್ಮ ನೆಚ್ಚಿನ ಡ್ರೆಸ್ ಹೊಲಿಸಿಕೊಳ್ಳುತ್ತಾರಂತೆ.

Modi Kurta ಬ್ರ್ಯಾಂಡ್
Modi Kurta ಬ್ರ್ಯಾಂಡಿನ ಡ್ರೆಸ್ ಅನ್ನು ಬಿಪಿನ್ ಚೌಹಾಣ್ 5 ವರ್ಷಗಳ ಹಿಂದೆ ಮಾರುಕಟ್ಟೆಗೆ ಬಿಟ್ಟರಂತೆ. ಅದು ಭಾರಿ ಯಶಸ್ಸೂ ಗಳಿಸಿತಂತೆ. ಆದರೆ ಮೋದಿ ವಿರೋಧಿ ಪಾಳಯದವರು ಅದನ್ನು ಇಷ್ಟಪಡದಿರುವುದರಿಂದ ಅದು ಎನ್ನಾರೈಗಳು ಮತ್ತು ಮೋದಿ ಬೆಂಬಲಿಗರಿಗೆ ಮಾತ್ರ ಸೀಮಿತವಾಗಿದೆಯಂತೆ.












Click it and Unblock the Notifications